ADVERTISEMENT

ತುಮಕೂರು: ಬಡವರಿಗೆ 95 ಸಾವಿರ ಲೀಟರ್ ಹಾಲು

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಸರಬರಾಜು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:58 IST
Last Updated 2 ಏಪ್ರಿಲ್ 2020, 16:58 IST
ಸಿ.ವಿ.ಮಹಾಲಿಂಗಯ್ಯ
ಸಿ.ವಿ.ಮಹಾಲಿಂಗಯ್ಯ   

ತುಮಕೂರು: ರಾಜ್ಯ ಸರ್ಕಾರದ ನಿರ್ಧಾರದಂತೆ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) 95,000 ಲೀಟರ್‌ ಹಾಲನ್ನು ಬಡವರು, ಕೊಳೆಗೇರಿ ನಿವಾಸಿಗಳ ಮನೆಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ.

ತುಮುಲ್‌ನಲ್ಲಿ ಒಂದು ಲೀಟರ್‌ ಹಾಲಿನ ವಿಶೇಷ ಪ್ಯಾಕೆಟ್‌ಗಳು ತಯಾರಾಗಲಿವೆ. ಅವುಗಳಲ್ಲಿ 70 ಸಾವಿರ ಲೀಟರ್‌ ಹಾಲನ್ನು ಬೆಂಗಳೂರಿಗೆ, ಉಳಿದ 25 ಸಾವಿರ ಲೀಟರ್‌ ಹಾಲನ್ನು ತುಮಕೂರಿನಲ್ಲಿನ ಬಡವರಿಗೆ ಏಪ್ರಿಲ್‌ 3ರಿಂದ ಹಂಚಲು ನಿರ್ಧರಿಸಲಾಗಿದೆ. ಫಲಾನುಭವಿಗಳನ್ನು ಸ್ಥಳೀಯಾಡಳಿತ ಗುರುತಿಸಲಿದೆ. ಆ ಪ್ರದೇಶದವರೆಗೆ ತುಮುಲ್‌ ಹಾಲು ಸರಬರಾಜು ಮಾಡಲಿದೆ.

ಲಾಕ್‌ಡೌನ್‌ನಿಂದ ಹಾಲು ಉತ್ಪಾದಕರ ಆದಾಯ ಕುಸಿಯಬಾರದು, ಬಡವರಿಗೂಪೌಷ್ಟಿಕಾಂಶ ಭರಿತ ಆಹಾರ ಪದಾರ್ಥ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಉಚಿತವಾಗಿ ಹಾಲು ವಿತರಣೆಗೆ ಮುಂದಾಗಿದೆ.

ADVERTISEMENT

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಸಹಕಾರದೊಂದಿಗೆ 7.5 ಲಕ್ಷ ಲೀಟರ್‌ ಹಾಲನ್ನು ಉತ್ಪಾದಕರ ಸಂಘಗಳ ಒಕ್ಕೂಟದ ಮೂಲಕ ಖರೀದಿಸಿ ನಿತ್ಯ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ 95,000 ಲೀಟರ್ ಹಾಲು ಪೂರೈಸುವಂತೆ ಕೆಎಂಎಫ್‌ ಸಂಸ್ಥೆಯು ತುಮುಲ್‌ಗೆ ತಿಳಿಸಿದೆ.

ಉಚಿತ ಹಾಲನ್ನು ಲಾಕ್‌ಡೌನ್‌ನಿಂದ ಸಂತ್ರಸ್ತರಾದವರಿಗೆ ಮಾತ್ರ ಕೊಡಬೇಕಿದೆ. ಹಾಗಾಗಿ ಹಾಲಿನ ವಿಶೇಷ ಪ್ಯಾಕೆಟ್‌ ಮೇಲೆ ‘ಮಾರಾಟಕ್ಕಾಗಿ ಅಲ್ಲ’ ಎಂಬ ಬರಹ ಇರಲಿದೆ
ಸಿ.ವಿ.ಮಹಾಲಿಂಗಯ್ಯ, ತುಮುಲ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.