ADVERTISEMENT

ತುರುವೇಕೆರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಂಪಿಗೆ ತೋಂಟದಾರ್ಯ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:32 IST
Last Updated 13 ಆಗಸ್ಟ್ 2025, 5:32 IST
ಸಂಪಿಗೆ ತೋಂಟದಾರ್ಯ 
ಸಂಪಿಗೆ ತೋಂಟದಾರ್ಯ    

ತುರುವೇಕೆರೆ: ತಾಲ್ಲೂಕು ಕಸಾಪದಿಂದ ಸೆಪ್ಟೆಂಬರ್ 22ರಂದು ನಡೆಯುವ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಸಂಪಿಗೆ ತೋಂಟದಾರ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು.

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆದ ಸಮ್ಮೇಳನ ಅಧ್ಯಕ್ಷರ ಆಯ್ಕೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮ್ಮೇಳನ ನಡೆಸಲು ಎಲ್ಲ ಹೋಬಳಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸಾಹಿತ್ಯಾಸಕ್ತರ ತೀರ್ಮಾನದಂತೆ ಕಾರ್ಯಕ್ರಮದ ರೂಪುರೇಷೆ ಮಾಡಲಾಗಿದೆ. ಶಾಸಕ ಎಂ.ಟಿ.ಕೃಷ್ಣಪ್ಪ ಸಮ್ಮೇಳನಕ್ಕೆ ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಸಮ್ಮೇಳನವನ್ನು ವೈಟಿ ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ನೆರವೇರಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಮಗ ಬಾಬು ಹಿರಣ್ಣಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸ್ಮರಣ ಸಂಚಿಕೆಗೆ ತಾಲ್ಲೂಕಿನ ಯುವ ಸಾಹಿತಿಗಳು, ನಾಗರಿಕರು ತಾಲ್ಲೂಕಿಗೆ ವಿಶೇಷ ಲೇಖನಗಳನ್ನು ಆಗಸ್ಟ್ 25ರೊಳಗೆ ಕಳುಹಿಸಿಕೊಡಬೇಕು. ಲೇಖನಗಳ ಆಯ್ಕೆ ಸಂಪಾದಕ ಮಂಡಳಿಯದ್ದಾಗಿರುತ್ತದೆ ಎಂದರು.

ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಕಾರ್ಯದರ್ಶಿ ದಿನೇಶ್, ಮಾಯಸಂದ್ರ ಹೋಬಳಿ ಅಧ್ಯಕ್ಷ ಮುನಿರಾಜು, ಪದಾಧಿಕಾರಿಗಳಾದ ಮಂಜೇಗೌಡ, ಕೆಂಪರಾಜು, ಪರಮೇಶ್ವರ ಸ್ವಾಮಿ, ಷಣ್ಮುಖಪ್ಪ, ಆನಂದಜಲ, ನಂಜೇಗೌಡ, ರಾಘವೇಂದ್ರ, ಬಸವರಾಜು, ಶಿವರಾದ್ಯ, ಲೋಕೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.