ತುರುವೇಕೆರೆ: ರೈತರು, ಮಹಿಳೆಯರ ಮೇಲೆ ಮೈಕ್ರೊ ಫೈನಾನ್ಸ್‌ಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯಿಂದ ತಹಶೀಲ್ದಾರ್ ಕುಂಞ ಅಹ್ಮದ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಮೈಕ್ರೊ ಫೈನಾನ್ಸ್‌ನ ಬಡ್ಡಿ ದಂಧೆ ತಡೆಗೆ ಸರ್ಕಾರ ಮಧ್ಯಪ್ರವೇಶಿಸಬೇಕು. ಖಾಸಗಿ ಹಣಕಾಸು ಸಂಸ್ಥೆಗಳಿಂದ ಬಡ್ಡಿ, ಚಕ್ರಬಡ್ಡಿ, ಸಾಲ ವಸೂಲಾತಿಗೆ ಬಳಸುತ್ತಿರುವ ದಬ್ಬಾಳಿಕೆ, ಗೂಂಡಾಗಿರಿಯಿಂದ ಸಾರ್ವಜನಿಕರು ರೋಸಿಹೋಗಿದ್ದು, ಕೆಲವರು ಅತ್ಮಹತ್ಯೆ ದಾರಿ ತುಳಿದಿದ್ದಾರೆ ಎಂದರು.
ಕೆಲವರು ಗ್ರಾಮಗಳನ್ನೇ ತೊರೆಯುತ್ತಿದ್ದಾರೆ. ಇನ್ನೂ ಕೆಲವರು ಸಾಲಗಾರರಿಗೆ ಹೆದರಿ ಒಡವೆ, ಮಾಂಗಲ್ಯ ಸೇರಿದಂತೆ ಮನೆಗಳನ್ನೇ ಅಡವಿಟ್ಟು ಸಾಲದ ಶೂಲಕ್ಕೆ ತುತ್ತಾಗಿದ್ದಾರೆ ಎಂದರು.
ಖಾಸಗಿ ಹಣಕಾಸು ಸಂಸ್ಥೆಗಳನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾಲದ ಸುಳಿಯಲ್ಲಿರುವ ಜನರ ಜೀವನ ಸುಧಾರಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಆಟೊ ಚಾಲಕರ ಸಂಘದ ತಾಲ್ಲೂಕು ಅಧ್ಯಕ್ಷ ಗಂಗಾಧರ್, ಸವಿತಾ ಸಮಾಜದ ಧನಂಜಯ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.