ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ: ವಿ.ಸೋಮಣ್ಣಗಿಂತ ಪತ್ನಿಯೇ ಶ್ರೀಮಂತೆ!

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 4:51 IST
Last Updated 2 ಏಪ್ರಿಲ್ 2024, 4:51 IST
ವಿ.ಸೋಮಣ್ಣ
ವಿ.ಸೋಮಣ್ಣ   

ತುಮಕೂರು: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗಿಂತ ಅವರ ಪತ್ನಿ ಜಿ.ಶೈಲಜಾ ಹೆಚ್ಚು ಶ್ರೀಮಂತರಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸೋಮವಾರ ನಾಮಪತ್ರದ ಜತೆಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಬಿ.ಎ ಪದವೀಧರರಾದ ಸೋಮಣ್ಣ ಅವರು ಸಮಾಜ ಸೇವೆಯನ್ನು ತಮ್ಮ ವೃತ್ತಿ ಎಂದು ಹೇಳಿಕೊಂಡಿದ್ದಾರೆ. ಪತ್ನಿ ಶೈಲಜಾ ಕೃಷಿಯ ಜೊತೆ ಸಮಾಜಸೇವೆಯಲ್ಲಿ ತೊಡಗಿದ್ದಾರೆ ಎಂದು ನಮೂದಿಸಿದ್ದಾರೆ. ಸೋಮಣ್ಣ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ವಿ.ಸೋಮಣ್ಣ ಒಟ್ಟು ₹17.56 ಕೋಟಿ ಆಸ್ತಿ ಹೊಂದಿದ್ದರೆ, ಜಿ.ಶೈಲಜಾ ಬಳಿ ಒಟ್ಟು ₹43.03 ಕೋಟಿ ಆಸ್ತಿ ಇದೆ. ಸೋಮಣ್ಣ ಬಳಿ ನಗದು ₹8.12 ಲಕ್ಷ, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ₹4.55 ಕೋಟಿ, ₹17 ಲಕ್ಷ ಮೌಲ್ಯದ ಕ್ವಾಲೀಸ್ ವಾಹನ, ₹10.35 ಲಕ್ಷ ಮೌಲ್ಯದ 654 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು ₹5.18 ಕೋಟಿ ಚರಾಸ್ತಿ ಹೊಂದಿದ್ದಾರೆ.

ADVERTISEMENT

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಪ್ಲಾಂಟೇಷನ್, ಬೆಂಗಳೂರಿನ ವಿವಿಧೆಡೆ ಮನೆ, ನಿವೇಶನ, ವಾಣಿಜ್ಯ ಕಟ್ಟಡ, ಕೃಷಿಯೇತರ ಜಮೀನು ಸೇರಿದಂತೆ ಒಟ್ಟು ₹12.74 ಕೋಟಿ ಮೌಲ್ಯದ ಸ್ಥಿರಾಸ್ತಿ ಒಡೆಯರಾಗಿದ್ದಾರೆ.

ಶೈಲಜಾ ಬಳಿ ₹3 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ₹38.96 ಲಕ್ಷ, ಷೇರು, ಮ್ಯೂಚುವಲ್ ಫಂಡ್‌ಗಳಲ್ಲಿ ₹9.84 ಲಕ್ಷ ತೊಡಗಿಸಿದ್ದಾರೆ. ಪುತ್ರ ಬಿ.ಎಸ್.ನವೀನ್ ಅವರಿಗೆ ₹1.56 ಕೋಟಿ ಸಾಲ, ಸೋಮಣ್ಣ ಅವರಿಗೆ ₹20 ಲಕ್ಷ ಸಾಲ, ಬಿ.ಎಸ್.ದಿವ್ಯಾಗೆ ₹55 ಲಕ್ಷ ಸಾಲ ಕೊಟ್ಟಿದ್ದಾರೆ. ₹10.07 ಲಕ್ಷ ಮೌಲ್ಯದ ಇನ್ನೋವಾ ಕಾರು, 2 ಕೆ.ಜಿ 524 ಗ್ರಾಂ ಚಿನ್ನ, 30 ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ಹೊಂದಿದ್ದಾರೆ. ಚಿನ್ನ, ಬೆಳ್ಳಿ ಸಾಮಗ್ರಿಗಳ ಮೌಲ್ಯ ₹1.05 ಕೋಟಿ ಸೇರಿದಂತೆ ಒಟ್ಟು ₹4.38 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಬೆಂಗಳೂರಿನ ವಿವಿಧೆಡೆ ಮನೆ, ನಿವೇಶನ, ವಾಣಿಜ್ಯ ಕಟ್ಟಡ, ಕೃಷಿಯೇತರ ಜಮೀನು ಸೇರಿದಂತೆ ಒಟ್ಟು ₹38.65 ಕೋಟಿ ಮೌಲ್ಯದ ಸ್ಥಿರಾಸ್ತಿ ಶೈಲಜಾ ಹೆಸರಿನಲ್ಲಿ ಇದೆ.

ಸಾಲ: ಸೋಮಣ್ಣ ಆದಾಯದ ಜತೆಗೆ ₹6.44 ಕೋಟಿ ಸಾಲವನ್ನೂ ಹೊಂದಿದ್ದಾರೆ. ಶೈಲಜಾ ₹16.18 ಕೋಟಿ ಸಾಲ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.