
ತೋವಿನಕೆರೆ: 25 ವರ್ಷಗಳ ಹಿಂದೆ ವೆನಿಲ್ಲಾ ಬೆಳೆದವರು ಸುವರ್ಣಯುಗ ಕಂಡಿದ್ದರು. ಆನಂತರ ಬೆಲೆ ಕುಸಿತದಿಂದ ಕೈಸುಟ್ಟುಕೊಂಡ ರೈತರು ಇದರ ಸಹವಾಸವೇ ಬೇಡ ಎಂದು ದೂರ ಸರಿದಿದ್ದರು.
ತೋವಿನಕೆರೆಯ ಸಾವಿರಾರು ರೈತರು ವೆನಿಲ್ಲಾ ಬೆಳದು ಹಸಿ ಕಾಯಿ ಕೆ.ಜಿ.ಗೆ ₹3,600ರಂತೆ, ಒಣಕಾಯಿ ಕೆ.ಜಿಗೆ ₹18,000ದಂತೆ ಮಾರಾಟ ಮಾಡಿದ್ದರು. ಜಿಲ್ಲೆಯಲ್ಲಿ ನೂರಾರು ಎಕರೆಯಲ್ಲಿ ಬೆಳೆಯಲಾಗಿತ್ತು. ನಂತರದ ವರ್ಷಗಳಲ್ಲಿ ತೀವ್ರ ಬೆಲೆ ಕುಸಿತ ಕಂಡು ಈ ಬೆಳೆ ನಾಪತ್ತೆಯಾಗಿತ್ತು. ಜಿಲ್ಲೆಯ ಕೆಲವು ರೈತರು ಬಳ್ಳಿಯನ್ನು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದರು.
ಆದರೆ ಈಗ ಈ ಬೆಳೆಯತ್ತ ಮತ್ತೆ ರೈತರು ಗಮನಹರಿಸಿದ್ದಾರೆ. ನಾಲ್ಕೈದು ವರ್ಷಗಳಿಂದ ವೆನಿಲ್ಲಾ ಬೀನ್ಸ್‌ಗೆ ಸಾಧಾರಣ ಬೆಲೆ ಸಿಗುತ್ತಿದ್ದು, ಹಸಿ ಕಾಯಿ ₹600ರಿಂದ ₹1,000ಕ್ಕೆ ಮಾರಾಟವಾಗುತ್ತಿದೆ.
ತೋವಿನಕೆರೆ ಸಮೀಪದ ಮಣುವಿನಕುರಿಕೆ ಎಂ.ಪಿ.ಶಿವಶಂಕರ ಬೆಳೆದಿರುವ ವೆನಿಲ್ಲಾ ಕಾಯಿಯನ್ನು ಕುಶಾಲನಗರದ ದಿನೇಶ್ ಕೆ.ಜಿಗೆ ₹700ರಂತೆ 43 ಕೆ.ಜಿ ಖರೀದಿಸಿದ್ದಾರೆ.
‘25 ವರ್ಷಗಳ ಹಿಂದಿನದು ಮರೆಯಬೇಕಾದ ಬೆಲೆ. ಕೆ.ಜಿಗೆ ₹700 ಇತರೆ ಬೆಳೆಗಳಿಗೆ ಹೋಲಿಸಿದರೆ ಉತ್ತಮವಾದ ಬೆಲೆ. ಈ ಬೆಲೆಯಲ್ಲಿ ಸ್ಥಿರತೆ ಕಂಡುಬಂದರೆ ರೈತರು ಮತ್ತೆ ಈ ಬೆಳೆಯತ್ತ ಆಸಕ್ತಿ ತೋರಿಸಬಹುದು’ ಎನ್ನುತ್ತಾರೆ ವೆನಿಲ್ಲಾ ಬೆಳೆದಿರುವ ರೈತ ಎಂ.ಪಿ.ಶಿವಶಂಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.