ADVERTISEMENT

ಮಧುಗಿರಿ: ಅಡ್ಡಾದಿಡ್ಡಿ ವಾಹನ ನಿಲುಗಡೆ, ಸಂಚಾರಕ್ಕೆ ಅಡ್ಡಿ

ಪಟ್ಟಣದ ಪಾದಚಾರಿ ಮಾರ್ಗ ಒತ್ತುವರಿ– ತೆರವಿಗೆ ಸಾರ್ವಜನಿಕರ ಆಗ್ರಹ: ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 7:26 IST
Last Updated 1 ನವೆಂಬರ್ 2021, 7:26 IST
ಮಧುಗಿರಿ ಪಟ್ಟಣದ ಎಚ್.ಎಸ್. ರಸ್ತೆಯಲ್ಲಿ ರಸ್ತೆಯ ಎರಡು ಬದಿ ವಾಹನ ನಿಲುಗಡೆ ಮಾಡಲಾಗಿದೆ
ಮಧುಗಿರಿ ಪಟ್ಟಣದ ಎಚ್.ಎಸ್. ರಸ್ತೆಯಲ್ಲಿ ರಸ್ತೆಯ ಎರಡು ಬದಿ ವಾಹನ ನಿಲುಗಡೆ ಮಾಡಲಾಗಿದೆ   

ಮಧುಗಿರಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪೊಲೀಸರ ತಾತ್ಸಾರವೇ ಕಾರಣ. ಕಿರಿದಾದ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಕೂಗು ಹೆಚ್ಚಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಿತ್ಯ ಸಾವಿರಾರು ಮಂದಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಅವರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲ. ಪಾದಚಾರಿ ಮಾರ್ಗವನ್ನು ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವೆಡೆ ವಾಹನ ನಿಲುಗಡೆ ಸ್ಥಳವನ್ನೂ ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕಿರಿಕಿರಿಯಾಗುತ್ತಿದೆ ಎನ್ನುವುದು ವಾಹನ ಸವಾರರ ಆರೋಪ.

ADVERTISEMENT

ಪಟ್ಟಣದ ಕೆ.ಎಚ್. ರಸ್ತೆ, ಎಚ್.ಎಸ್. ರಸ್ತೆ, ಪುರಸಭೆ ಮುಂಭಾಗದ ರಸ್ತೆ ಹಾಗೂ ಡೂಂ ಲೈಟ್ ವೃತ್ತದಲ್ಲಿ ಬೆಸಸಂಖ್ಯೆ ಬರುವ ದಿನಾಂಕದಂದು ಒಂದು ಕಡೆ ಪಾರ್ಕಿಂಗ್ ಹಾಗೂ ಸರಿಸಂಖ್ಯೆ ದಿನಾಂಕದಂದು ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ವಾಹನಗಳ ಪಾರ್ಕಿಂಗ್‌ಗೆ ದಿನಾಂಕ ನಿಗದಿಪಡಿಸಿಲ್ಲ. ಹೀಗಾಗಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳೇ ಪಾರ್ಕಿಂಗ್ ಜಾಗಗಳಾಗಿ ಮಾರ್ಪಡುತ್ತಿವೆ.

ಪಟ್ಟಣದ ಪ್ರಮುಖ ವೃತ್ತಗಳಾದ ತುಮಕೂರು ಗೇಟ್, ಟಿವಿವಿ ವೃತ್ತ, ತಾಲ್ಲೂಕು ಕಚೇರಿ, ಖಾಸಗಿ ಬಸ್ ನಿಲ್ದಾಣ, ಶಿರಾ ಗೇಟ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಮಾಡಲಾಗುತ್ತದೆ.

ಪಟ್ಟಣದ ಎಚ್.ಎಸ್.ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ಯಾಂಕ್ ಇರುವುದರಿಂದ ನಿತ್ಯ ನೂರಾರು ಗ್ರಾಹಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬ್ಯಾಂಕ್‌ಗಳಿಗೆ ತೆರಳುತ್ತಾರೆ. ಬ್ಯಾಂಕ್ ಮುಂಭಾಗ ವಾಹನಗಳನ್ನು ಅಡ್ಡಲಾಗಿ ನಿಲುಗಡೆ ಮಾಡುವುದರಿಂದ ವೃದ್ಧರು, ಮಹಿಳೆಯರ ಮುಕ್ತ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಾಹನವನ್ನು ಸರಿಯಾಗಿ ನಿಲ್ಲಿಸಿ ಎಂದು ಹೇಳಿದರೆ ಜಗಳಗಳಿಗೆ ಕಾರಣವಾಗುತ್ತದೆ.

ಪುರಸಭೆ ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಇತರೆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಪ್ರಯಾಣಕ್ಕೆ ಸರಿಯಾದ ಮಾರ್ಗಗಳೇ ಇಲ್ಲದಂತಾಗಿದೆ. ಅಂಗಡಿ ಮಾಲೀಕರು ಪಾದಚಾರಿ ರಸ್ತೆಗಳನ್ನು ಅತಿಕ್ರಮಣ ಮಾಡಿರುವುದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾಗಿದೆ. ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ.

ರಸ್ತೆ ಸುರಕ್ಷತೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿತ ರಕ್ಷಣಾ ಸಮಿತಿ ಸಭೆಗಳಲ್ಲಿ ಸಾರ್ವಜನಿಕರು ದೂರು ನೀಡಿದ ಫಲವಾಗಿ ವಾಹನ ನಿಲುಗಡೆಗೆ ನಾಮಪಲಕ ಹಾಗೂ ರಸ್ತೆಗಳಿಗೆ ಬಿಳಿ ಬಣ್ಣದ ಗುರುತು ಮಾಡಲಾಗಿತ್ತು. ವಾಹನ ನಿಲುಗಡೆ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ನಿತ್ಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದರು. ಆದರೆ ಇದೆಲ್ಲವೂ ಕೆಲವೇ ದಿನಗಳಿಗೆ ಸೀಮಿತವಾಗಿತ್ತು.

ಶಾಲೆ, ಕಾಲೇಜಿಗೆ ಹೋಗಿ ಬರಲು ಸಮಸ್ಯೆಯಾಗುತ್ತದೆ. ರಸ್ತೆಗಳಲ್ಲಿಯೇ ಸಂಚಾರ ಮಾಡಬೇಕಿದೆ. ಅಂಗಡಿ ಮಾಲೀಕರ ಅತಿಕ್ರಮಣ, ವಾಹನಗಳ ಅಡ್ಡಾದಿಡ್ಡಿ ಚಾಲನೆ ಹಾಗೂ ನಿಲುಗಡೆಯಿಂದ ಮುಕ್ತ ಸಂಚಾರಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಪಟ್ಟಣದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಪಾದಚಾರಿಗಳು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಆಯಕಟ್ಟಿನ ಜಾಗಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಜನರಆಗ್ರಹ.

ಪಟ್ಟಣದ ಬಹುತೇಕ ಅಂಗಡಿ ಹಾಗೂ ಮನೆಯ ಮಾಲೀಕರು ಪಾದಚಾರಿ ಜಾಗ ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರು ಸಂಚಾರಕ್ಕೆ ಅವಕಾಶವೇ ಇಲ್ಲದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ನಿರ್ಣಯ ಕೈಗೊಂಡು ಒತ್ತುವರಿ ತೆರವುಗೊಳಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.