
ಕುಣಿಗಲ್: ತಾಲ್ಲೂಕಿನ ಕಿತ್ತನಾಮಂಗಲ ಕೆರೆ ಮಣ್ಣನ್ನು ಹೂಳೆತ್ತುವ ನೆಪದಲ್ಲಿ ಕಾಂಗ್ರೆಸ್ ಮುಖಂಡರು ಇಟ್ಟಿಗೆ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕೆರೆ ಅಂಗಳದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಸಬಾ ಹೋಬಳಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕುಲುಮೆಪಾಳ್ಯ ಶಿವಣ್ಣ ಮಾತನಾಡಿ, ಕಸಬ ಹೋಬಳಿ ಕೆರೆಗಳಿಗೆ ನೀರು ಹರಿಸಲು ವಿಫಲರಾಗಿರುವ ಶಾಸಕರು, ಶ್ರೀರಂಗ ಏತನೀರಾವರಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಹುತ್ತಿದುರ್ಗ ಹೋಬಳಿಯ ಕೇವಲ ಐದು ಕೆರೆಗೆ ನೆಪಮಾತ್ರಕ್ಕೆ ನೀರು ಹರಿಸಿ ಮಾಗಡಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಹೊರಟಿದ್ದಾರೆ. ಕಿತ್ತಾನಾಮಂಗಲ ಕೆರೆಗೆ ನೀರು ಹರಿಸುವ ಬದಲು ಹೂಳೆತ್ತುವ ನೆಪದಲ್ಲಿ ಕೆರೆ ಮಣ್ಣಿನಡಿಯಲ್ಲಿರುವ ಮರಳನ್ನು ತೆಗೆದು ಹಣ ಮಾಡಲು ಕಾಂಗ್ರೆಸ್ ಮುಖಂಡರು ಸಂಚು ನಡೆಸಿದ್ದಾರೆ ಎಂದು ದೂರಿದರು.
ಕೆರೆ ಮಣ್ಣು ರೈತರ ಹೊಲಗಳಿಗೆ ನೀಡುವ ಬದಲು ಅಂಚೆಪಾಳ್ಯ ಬಳಿಯ ಇಟ್ಟಿಗೆ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೆರೆ ಮಣ್ಣನ್ನು ಕಾರ್ಖಾನೆಗಳಿಗೆ ನೀಡಲು ಬಿಡುವುದಿಲ್ಲ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಂದುವರೆದರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗುಜ್ಜೆನಹಳ್ಳಿ ಕುಮಾರ್, ಬ್ರಹ್ಮಕುಮಾರ್, ಜಗದೀಶ್, ಪುಟ್ಟಣ್ಣ, ಗಂಗಾಧರ್, ಗಂಗಣ್ಣ, ಗಂಗಾಧರಯ್ಯ ಮತ್ತು ಗುಜ್ಜೆನಹಳ್ಳಿ, ಗಂಟಗಾನಹಳ್ಳಿ, ಕಾಡಮತ್ತಿಕೆರೆ, ಕಾಡರಾಮನಹಳ್ಳಿ, ಚನ್ನಾಪುರ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.