ADVERTISEMENT

PV Web Exclusive | ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ

ಕೆ.ಜೆ.ಮರಿಯಪ್ಪ
Published 4 ಡಿಸೆಂಬರ್ 2020, 10:25 IST
Last Updated 4 ಡಿಸೆಂಬರ್ 2020, 10:25 IST
ಕಾಂಗ್ರೆಸ್ (ಪ್ರಾತಿನಿಧಿಕ ಚಿತ್ರ)
ಕಾಂಗ್ರೆಸ್ (ಪ್ರಾತಿನಿಧಿಕ ಚಿತ್ರ)   

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಬೀಗುತ್ತಿರುವ ಬಿಜೆಪಿಯು ಗ್ರಾಮ ಪಂಚಾಯಿತಿ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿದೆ. ತಮ್ಮ ಪಕ್ಷದ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ಹೆಣೆಯುವಲ್ಲಿ ಬಿಜೆಪಿ ಮುಖಂಡರು ಮಗ್ನರಾಗಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ನಾಯಕರು ಇನ್ನೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡುವಷ್ಟಕ್ಕೇ ಸೀಮಿತರಾಗಿದ್ದಾರೆ. ‘ಸಿದ್ಧತೆ’ ಹೆಸರಿನಲ್ಲಿ ಸಮಯ ಮುಂದೂಡುತ್ತಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರು ಒಂದು ರೀತಿಯಲ್ಲಿ ಅಸಹಾಯಕರಾಗಿ ನೋಡುತ್ತಿದ್ದಾರೆ. ಬಿಜೆಪಿ ನಾಯಕರು ನಾಲ್ಕು ಹೆಜ್ಜೆ ಮುಂದಡಿ ಇಟ್ಟಿದ್ದಾರೆ. ಜೆಡಿಎಸ್, ಕಾಂಗ್ರೆಸ್ ನಾಯಕರಲ್ಲಿ ಚುನಾವಣೆಯ ಉತ್ಸಾಹವೇ ಕಾಣುತ್ತಿಲ್ಲ ಎಂದು ಆ ಪಕ್ಷದ ಕಾರ್ಯಕರ್ತರೇ ಬಹಿರಂಗವಾಗಿ ಅಲ್ಲಲ್ಲಿ ಹೇಳಿಕೆ ನೀಡುತ್ತಿದ್ದಾರೆ.

ಜಿಲ್ಲೆಯ ಮಟ್ಟಿಗೆ ಪ್ರಬಲವಾಗಿದ್ದ ಜೆಡಿಎಸ್, ಕಾಂಗ್ರೆಸ್ ಕೆಲ ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಲೇ ಸಾಗಿವೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಉತ್ತಮ ಸಾಧನೆಯನ್ನೇನೂ ತೋರಿಲ್ಲ. ನಂತರ ನಡೆದ ಲೋಕಸಭೆ ಚುನಾವಣೆಯಲ್ಲೂ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಿದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಶಿರಾ ಉಪಚುನಾವಣೆಯಲ್ಲಿ ಸೋಲು ಕಂಡರೂ ನಾಯಕರು ಪಾಠ ಕಲಿತಿಲ್ಲ. ದಿನಗಳು ಕಳೆದಂತೆ ಪಕ್ಷ ಹಿಮ್ಮುಖವಾಗಿ ಚಲಿಸುತ್ತಿರುವುದು ಗ್ರಾಮೀಣ ಪ್ರದೇಶದ, ತಳ ಹಂತದ ನಾಯಕರಲ್ಲಿ ಆತಂಕವನ್ನು ತರಿಸಿದೆ.

ADVERTISEMENT

ಶಿರಾ ಉಪಚುನಾವಣೆಗೆ ಆರಂಭದಲ್ಲೇ ಬಿಜೆಪಿ ಸಿದ್ಧತೆ ಮಾಡಿಕೊಂಡು ‘ಹೋರಾಡಿ’ದ ಫಲವಾಗಿ ಗೆಲುವು ಸಾಧ್ಯವಾಯಿತು ಎಂಬ ವಿಚಾರವನ್ನು ಮನಗಂಡಿರುವ ಪಕ್ಷದ ನಾಯಕರು, ಈಗ ಗ್ರಾಮ ಪಂಚಾಯಿತಿ ಚುನಾವಣೆಗೂ ಅದೇ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿದ್ದಾರೆ. ತಿಪಟೂರು, ಮಧುಗಿರಿಯಲ್ಲಿ ‘ಗ್ರಾಮ ಸ್ವರಾಜ್ಯ ಸಮಾವೇಶ’ ಸಂಘಟಿಸುವ ಮೂಲಕ ಪಕ್ಷದ ಕಾರ್ಯಕರ್ತರು, ಹಳ್ಳಿ ಮಟ್ಟದಲ್ಲಿ ಇರುವ ಮುಖಂಡರನ್ನು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ. ಗ್ರಾಮ ಪಂಚಾಯಿತಿಗಳ ಒಟ್ಟು ಕ್ಷೇತ್ರಗಳಲ್ಲಿ ಶೇ 80ರಷ್ಟು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದು, ಅದಕ್ಕೆ ಬೇಕಾದ ‘ವ್ಯವಸ್ಥೆ’ ಮಾಡಿಕೊಳ್ಳುತ್ತಿದ್ದಾರೆ. ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಬಿಜೆಪಿ ಹೆಚ್ಚು ಸದೃಢವಾಗಿಲ್ಲ. ಸಾಕಷ್ಟು ಕಡೆಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿ ಚುನಾವಣೆಗೆ ಅಭ್ಯರ್ಥಿಗಳು ಸಿಗುವುದು ಕಷ್ಟಕರವಾಗಿದೆ. ಅಂತಹುದರಲ್ಲಿ ಗ್ರಾ.ಪಂ.ಗೆ ಅಭ್ಯರ್ಥಿಗಳನ್ನು ನಿಲ್ಲಿಸಿ ಇತರ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುವ ಕಾರ್ಯಯೋಜನೆಯೊಂದಿಗೆ ಮುನ್ನಡೆದಿದೆ. ಗ್ರಾ.ಪಂ ಚುನಾವಣೆ ಎದುರಿಸಿ ಪಕ್ಷ ಗಟ್ಟಿಗೊಳಿಸಿದರೆ ಇದು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ತಳಪಾಯ ಭದ್ರಪಡಿಸಿಕೊಂಡಂತಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಸಾಧನೆಮಾಡಿ ಗ್ರಾಮೀಣ ಭಾಗದಲ್ಲಿ ಪಕ್ಷ ಹೆಚ್ಚು ಶಕ್ತಿಯುತವಾದರೆ ವಿಧಾನಸಭೆ ಚುನಾವಣೆಯಲ್ಲಿ ನೆರವಿಗೆ ಬರುತ್ತದೆ. ಮುಂದಿನ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಘಟನೆಗೆ ಒತ್ತುನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಕಾರ್ಯಕರ್ತರ ಪಡೆ ಇಲ್ಲ. ಏನಿದ್ದರೂ ಇತರ ಪಕ್ಷಗಳ ಕಾರ್ಯಕರ್ತರನ್ನೇ ಸೆಳೆದುಕೊಂಡು ಪಕ್ಷ ಬಲಪಡಿಸುವ ಸವಾಲು ಎದುರಾಗಿದೆ. ಶಿರಾ ಚುನಾವಣೆ ಸಮಯದಲ್ಲಿ ‘ಸೆಳೆಯುವ’ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ. ಈಗಲೂ ಅದೇ ಗುರಿಯನ್ನು ಹಾಕಿಕೊಂಡಿದೆ. ಅದಕ್ಕಾಗಿ ತಂಡ ರಚಿಸಿದ್ದು, ಅದು ಗುಪ್ತಗಾಮಿನಿಯಂತೆ ಕೆಲಸ ಮಾಡುತ್ತಿದೆ.

ಜೆಡಿಎಸ್, ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳದಿದ್ದರೆ ವಲಸೆ ತಡೆಯುವುದು ಕಷ್ಟಕರವಾಗುತ್ತದೆ. ಈಗಲೂ ಮೈಮರೆತರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಪಕ್ಷಕ್ಕೆ ಹಿನ್ನಡೆಯಾಗುವುದು ಖಚಿತ ಎನ್ನುತ್ತಾರೆ ಕಾಂಗ್ರೆಸ್‌ ನಾಯಕರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.