ADVERTISEMENT

ಕೊರಟಗೆರೆ: ಜೂನ್–ಜುಲೈಗೆ ಎತ್ತಿನಹೊಳೆ ನೀರು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:33 IST
Last Updated 3 ಮಾರ್ಚ್ 2026, 5:33 IST
<div class="paragraphs"><p>ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 </p></div>

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1

   

ಕೊರಟಗೆರೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿವಿಧೆಡೆ ₹40 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿ. ಪರಮೇಶ್ವರ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಹಾಗೂ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ವ್ಯಾಪ್ತಿಯಲ್ಲಿನ 25ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ADVERTISEMENT

ಕಳೆದ ಬಜೆಟ್‌ನಿಂದ ಇಲ್ಲಿವರೆಗೆ ಕ್ಷೇತ್ರದ ಅಭಿವೃದ್ಧಿಗೆ ₹218 ಕೋಟಿ ಮಂಜೂರಾಗಿದೆ. ಇದರಲ್ಲಿ ₹40 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸೋಮವಾರ ಅಡಿಗಲ್ಲು ಹಾಕಲಾಗಿದ್ದು, ಇನ್ನೂ ₹178 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಹಂತಹಂತವಾಗಿ ಚಾಲನೆ ನೀಡಲಾಗುವುದು ಎಂದರು.

ಕಳೆದ ಬಾರಿ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಹಲವು ಸೇತುವೆಗಳು ಹಾನಿಗೊಳಗಾಗಿದ್ದವು. ಮರುನಿರ್ಮಾಣದ ಸಂದರ್ಭದಲ್ಲಿ ಕೇವಲ ಸೇತುವೆ ನಿರ್ಮಾಣಕ್ಕಿಂತ ಅಂತರ್ಜಲ ಹೆಚ್ಚಳದ ದೃಷ್ಟಿಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ, ಹೊಳವನಹಳ್ಳಿ– ಬಿಡಿ ಪುರ, ಸಿರಿಗೋನಹಳ್ಳಿಸೇರಿದಂತೆ ವಿವಿಧೆಡೆ ಗರುಡಾಚಲ ನದಿಗೆ ಅಡ್ಡಲಾಗಿ ಚೆಕ್ಡ್ಯಾಂ ಹಾಗೂ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಮುಂದಿನ ಬಜೆಟ್‌ನಲ್ಲೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ. ಕೋರಾ ಮತ್ತು ತೋವಿನಕೆರೆ ಹೋಬಳಿ ವ್ಯಾಪ್ತಿಯ ಬಾಕಿ ಇರುವ ಕಾಮಗಾರಿಗೆ ಅಧಿವೇಶನ ಮಧ್ಯೆ ಅಥವಾ ನಂತರ ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದರು.

ಜೂನ್–ಜುಲೈ ವೇಳೆಗೆ ಎತ್ತಿನಹೊಳೆ ಯೋಜನೆಯ ನೀರು ಅರಸೀಕೆರೆಗೆ ತಲುಪಲಿದೆ. ತುಮಕೂರಿಗೆ ತರಲು ಪ್ರಯತ್ನ ನಡೆಯುತ್ತಿದೆ. ಮಧ್ಯೆ ಅರಣ್ಯ ಪ್ರದೇಶ ಇರುವುದರಿಂದ ತಾಂತ್ರಿಕ ತೊಡಕು ಉಂಟಾಗಿದೆ. ಈ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕಾಮಗಾರಿ ಪ್ರಾರಂಭವಾದ ಬಳಿಕ ನೀರು ಹರಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರಟಗೆರೆ ನೂತನ ಆಸ್ಪತ್ರೆಗೆ ₹40 ಕೋಟಿ ಹಾಗೂ ತೋವಿನಕೆರೆ ಆಸ್ಪತ್ರೆಗೆ ₹36 ಕೋಟಿ ಅನುದಾನ ನೀಡಲಾಗಿದೆ. ಕೋಳಾಲ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಈ ವರ್ಷದ ಬಜೆಟ್‌ನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತೋವಿನಕೆರೆಯಲ್ಲಿ ₹32 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ಜೂನಿಯರ್ ಕಾಲೇಜು ಮೈದಾನವನ್ನು ₹3.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಯುರೋಪಿಯನ್ ರಾಷ್ಟ್ರ, ಆಸ್ಟ್ರೇಲಿಯಾ, ಅಮೆರಿಕಾ ದೇಶದಲ್ಲಿ ಮಕ್ಕಳಿಗೆ ಮೊಬೈಲ್ ನಿಷೇಧವಿದೆ. 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್, ಇಂಟರ್‌ನೆಟ್ ನಿಷೇಧ ಮಾಡಬೇಕೆನ್ನುವ ಚರ್ಚೆ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ ತೀರ್ಮಾನ ಮಾಡಿದರೆ ನಾವು ನಿಷೇಧ ಮಾಡುತ್ತೇವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎ.ಸಿ ಗೋಟೂರ್ ಶಿವಪ್ಪ, ಎಸ್.ಇ. ಜಗದೀಶ್, ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಜಯಮ್ಮ, ಬೈರೇಶ್, ಎಚ್.ಕೆ.ಮಹಾಲಿಂಗಪ್ಪ, ಜಯರಾಮ್, ಟಿ.ಸಿ.ರಾಮಯ್ಯ, ಎಲ್.ರಾಜಣ್ಣ, ಕೆ.ಆರ್.ಓಬಳರಾಜು, ವಿನಯ್, ಕವಿತಾ, ಸಿದ್ದಲಿಂಗಪ್ಪ, ಸುರೇಶ್, ಆನಂದ್, ರವಿಕುಮಾರ್, ಚಲಿ, ಲೋಕೇಶ್ ಉಪಸ್ಥಿತರಿದ್ದರು.

ಇರಾನ್, ದುಬೈ, ಬೆಹರೇನ್, ಸೌದಿ ಅರೇಬಿಯಾದಲ್ಲಿ ಕರ್ನಾಟಕದ ಶಾಸಕರು, ವ್ಯಾಪಾರಸ್ಥರು ಸೇರಿ ಪ್ರವಾಸಿಗರು ಸಿಲುಕಿದ್ದಾರೆ. ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ವಿದೇಶ ಸಚಿವ ಜೈಶಂಕರ್ ವಿಶೇಷ ನಿಯೋಗದ ಮೂಲಕ ಭಾರತೀಯರ ರಕ್ಷಣೆಗೆ ವಿದೇಶಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಡಾ.ಜಿ.ಪರಮೇಶ್ವರ, ಗೃಹಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.