ADVERTISEMENT

ಶಿಕ್ಷಣದಂತೆ ಕ್ರೀಡೆಯಲ್ಲೂ ಉಡುಪಿ ನಂ.1 ಆಗಲಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:10 IST
Last Updated 10 ಸೆಪ್ಟೆಂಬರ್ 2011, 10:10 IST

ಉಡುಪಿ: `ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಎಷ್ಟು ಮುಂಚೂಣಿಯಲ್ಲಿದೆ. ಅದೇ ರೀತಿ ಕ್ರೀಡಾ ಕ್ಷೇತ್ರದಲ್ಲಿಯೂ ರಾಜ್ಯದಲ್ಲಿ ನಂ.1 ಜಿಲ್ಲೆ ಎಂದು ಗುರುತಿಸಿಕೊಳ್ಳುವಂತಾಗಬೇಕು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್ .ಆಚಾರ್ಯ ಇಲ್ಲಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ, ಕ್ರೀಡಾಪ್ರಾಧಿಕಾರದ ಸಹಯೋಗದಲ್ಲಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ 2011-12 ಉದ್ಘಾಟಿಸಿ ಅವರು ಮಾತನಾಡಿದರು.

 `ಶಾಲಾ ಕಾಲೇಜುಗಳು, ಪೋಷಕರು ಮತ್ತು ಶಿಕ್ಷಕರು  ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ  ಪ್ರೋತ್ಸಾಹ ನೀಡಬೇಕು~ ಎಂದು ಸಚಿವರು ಸಲಹೆ ಮಾಡಿದರು.

`ಕಳೆದ 3-4 ವರ್ಷಗಳಿಂದ ರಾಜ್ಯ ಸರ್ಕಾರ ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಇತ್ತೀಚೆಗಷ್ಟೇ ಸ್ವತಃ ಮುಖ್ಯಮಂತ್ರಿಗಳೇ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ, ಈಜುಕೊಳಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಕ್ರೀಡೆಗಳ ಉತ್ತೇಜನಕ್ಕಾಗಿ  ಕ್ರೀಡಾ ವಸತಿ ನಿಲಯ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ~ ಎಂದರು.

 ಪೈಕಾ ಗ್ರಾಮೀಣ ಕ್ರೀಡಾಕೂಟದ ಧ್ವಜಾರೋಹಣವನ್ನು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿಜಯಕುಮಾರ್ ಶೆಟ್ಟಿ ನೆರವೇರಿಸಿದರು.  ಜಿ.ಪಂ ಅಧ್ಯಕ್ಷ ಕಟಪಾಡಿ ಶಂಕರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪೌರಾಯುಕ್ತ ಗೋಕುಲ್‌ದಾಸ್ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಂದ್ರ ಮಧ್ಯಸ್ಥ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ  ಡಿ.ಮಂಜುನಾಥಯ್ಯ, ನಗರ ಸಭೆಯ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಕ್ರೀಡಾಪಟು  ಮಿಸ್ಬಾ ಅಹಮ್ಮದ್, ಜಿ. ಪಂ ಮುಖ್ಯ ಲೆಕ್ಕಾಧಿಕಾರಿ ತಿಮ್ಮಪ್ಪ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸೀತಾನದಿ ವಿಠಲ್ ಶೆಟ್ಟಿ, ಉಡುಪಿ ತಾಲ್ಲೂಕು ಕ್ರೀಡಾಧಿಕಾರಿ ನಾರಾಯಣ ರಾವ್, ಕಾರ್ಕಳ ತಾಲ್ಲೂಕು ಕ್ರೀಡಾಧಿಕಾರಿ ಗಣಪಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.