ಉಡುಪಿ: ಜಿಲ್ಲೆಯಾದ್ಯಂತ ಶಾಲಾ ವಾಹನಗಳನ್ನು ಗುರುವಾರ ತಪಾಸಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.
ಬ್ರಹ್ಮಾವರ ವ್ಯಾಪ್ತಿಯಲ್ಲಿ ಬುಧವಾರ ಶಾಲಾ ವಾಹನ ಮತ್ತು ಇನ್ನೊಂದು ವಾಹನದ ನಡುವೆ ಅಪಘಾತ ಸಂಭವಿಸಿ, ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ನಿಟ್ಟಿನಲ್ಲಿ ಪೊಲೀಸರು ಶಾಲಾ ವಾಹನಗಳ ತಪಾಸಣೆ ನಡೆಸಿದರು.
ಜಿಲ್ಲೆಯಾದ್ಯಂತ 930 ಶಾಲಾ ವಾಹನಗಳನ್ನು ತಪಾಸಣೆ ನಡೆಸಿದ್ದು, ಒಟ್ಟು 282 ಪ್ರಕರಣಗಳನ್ನು ದಾಖಲಿಸಿ ₹1.58 ಲಕ್ಷ ದಂಡ ವಿಧಿಸಲಾಗಿದೆ. ಪಾನಮತ್ತರಾಗಿ ವಾಹನ ಚಾಲನೆ ಮಾಡಿರುವ ಒಂದು ಪ್ರಕರಣ, ಸರಿಯಾದ ದಾಖಲೆಗಳನ್ನು ಹೊಂದದೇ ಇರುವ 39 ಪ್ರಕರಣಗಳು, ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೊಂಡೊಯ್ದ ಬಗ್ಗೆ 48 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಶಾಲೆ ಆರಂಭವಾದ ಬಳಿಕ ಶಾಲಾ ವಾಹನ ಚಾಲಕರ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ವಾಹನಗಳ ತಪಾಸಣೆ ನಡೆಸಲಾಗಿದೆ ಎಂದರು.
ಶಾಲೆಯ ಎಲ್ಲಾ ವಾಹನಗಳ ದಾಖಲೆ ಇಟ್ಟುಕೊಳ್ಳಲು, ವಾಹನದ ಮಿತಿಗನುಗುಣವಾಗಿ ಮಕ್ಕಳನ್ನು ಕೊಂಡೊಯ್ಯಲು ಹಾಗೂ ಇತರೆ ಸುರಕ್ಷತಾ ಕ್ರಮಗಳನ್ನು ಒಂದು ವಾರದೊಳಗೆ ಅಳವಡಿಸಿಕೊಳ್ಳಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. ಒಂದು ವಾರದೊಳಗೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಸಂಬಂಧಿತ ಶಾಲಾ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ಬಸ್, ವ್ಯಾನ್, ಆಟೊ ರಿಕ್ಷಾ ಚಾಲಕರು ಪಾನಮತ್ತರಾಗಿದ್ದಾರೆಯೇ ಎಂಬುದಾಗಿ ಮೊದಲು ತಪಾಸಣೆ ನಡೆಸಲಾಯಿತು. ಪಾಲಕರೊಬ್ಬರು ಪಾನಮತ್ತರಾಗಿ ಮಕ್ಕಳನ್ನು ಶಾಲೆಗೆ ವಾಹನದಲ್ಲಿ ಕರೆದೊಯ್ಯುತ್ತಿದ್ದ ಪ್ರಕರಣವೊಂದು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.
ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಎಚ್ಚರ ವಹಿಸಬೇಕು.ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಈ ಹಿಂದೆಯೂ ಅಲ್ಲಲ್ಲಿ ಶಾಲಾ ವಾಹನ ಚಾಲಕರ ಸಭೆ ನಡೆಸಿ, ಅವರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿತ್ತು. ಈಗ ವಶಕ್ಕೆ ಪಡೆದಿರುವ ವಾಹನಗಳನ್ನು ಬಿಟ್ಟು ಕಳುಹಿಸಲಾಗುವುದು. ಒಂದು ವಾರ ಬಿಟ್ಟು ಮತ್ತೆ ತಪಾಸಣೆ ನಡೆಸಲಿದ್ದೇವೆ. ಆಗಲೂ ನಿಯಮ ಉಲ್ಲಂಘಿಸಿರುವ ಪ್ರಕರಣಗಳು ಪತ್ತೆಯಾದರೆ, ಅಂತಹ ವಾಹನ ಜಪ್ತಿ ಮಾಡಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ತಪಾಸಣೆಯಲ್ಲಿ ಐವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 30 ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಕಾನೂನು ಉಲ್ಲಂಘಿಸಿದರೆ ಕ್ರಮ
ಕಾನೂನು ಉಲ್ಲಂಘಿಸುವ ಇತರ ವಾಹನಗಳ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಹಂತ ಹಂತವಾಗಿ ತಪಾಸಣೆ ನಡೆಸಲಾಗುವುದು ಎಂದು ಹರಿರಾಮ್ ಶಂಕರ್ ತಿಳಿಸಿದರು. ಉಡುಪಿ ನಗರದಲ್ಲಿ ಎರಡು ಕಡೆ ಟ್ರಾಫಿಕ್ ಸಿಗ್ನಲ್ ಸ್ಥಾಪಿಸಲು ನಗರ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ನಗರದಲ್ಲಿ 90 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.