ADVERTISEMENT

ಕರಾವಳಿ ಅಭಿವೃದ್ಧಿಗೆ ಕೋಮುವಾದ ಅಡ್ಡಿ: ಭಾಸ್ಕರ್ ರಾವ್

ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 13:22 IST
Last Updated 26 ಜುಲೈ 2022, 13:22 IST
ಮಂಗಳವಾರ ಕುಂಜಿಬೆಟ್ಟುವಿನ ಕಚೇರಿಯಲ್ಲಿಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳವಾರ ಕುಂಜಿಬೆಟ್ಟುವಿನ ಕಚೇರಿಯಲ್ಲಿಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಕರಾವಳಿಯ ಜಿಲ್ಲೆಗಳಲ್ಲಿ ಕೋಮವಾದದ ವಿಷ ಹರಡುವ ಮೂಲಕ ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು.

ಮಂಗಳವಾರ ಕುಂಜಿಬೆಟ್ಟುವಿನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕೌಶಲ ಹಾಗೂ ಉದ್ಯಮ ಶೀಲತೆಯ ಗುಣಗಳಿಂದ ಕರಾವಳಿಗರು ಪ್ರಪಂಚದ ಉದ್ದಗಲಕ್ಕೂ ಉದ್ಯಮ ವಿಸ್ತರಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮುಂದಿರುವ ಉಡುಪಿಯಲ್ಲಿ ವಿಮಾನ ನಿಲ್ದಾಣ ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಉಡುಪಿಯಲ್ಲಿ ವಿಮಾನ ನಿಲ್ದಾಣವಾದರೆ, ಕೇವಲ ಎರಡೇ ವರ್ಷಗಳಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗುವ ಮಟ್ಟಕ್ಕೆ ಬೆಳೆದು ನಿಲ್ಲಲಿದೆ. ಜಿಲ್ಲೆಯ ಪ್ರವಾಸೋದ್ಯಮ, ಮತ್ಸ್ಯೋದ್ಯಮ ಜಾಗತಿಕ ಮಟ್ಟಕ್ಕೆ ಬೆಳೆದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಿಗೆ ಬಂಡವಾಳ ಸುರಿಯುವ ಸರ್ಕಾರ ಕರಾವಳಿಯನ್ನು ನಿರ್ಲಕ್ಷ್ಯ ಮಾಡಿದೆ ಎಂದರು.

ADVERTISEMENT

1997ರಲ್ಲಿ ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾದರೂ ಉಪ ವಿಭಾಗದ ಮನಸ್ಥಿತಿ ದೂರವಾಗಿಲ್ಲ. ಜಿಲ್ಲಾಧಿಕಾರಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ಇದ್ದರೆ ಜಿಲ್ಲೆ ಎನಿಸಿಕೊಳ್ಳುವುದಿಲ್ಲ. ಅಗತ್ಯ ಸೌಲಭ್ಯಗಳು ಸಿಗಬೇಕು ಎಂದು ಪ್ರತಿಪಾದಿಸಿದರು.

ಉಡುಪಿ ಜಿಲ್ಲೆಯಾಗಿ ಎರಡೂವರ ದಶಕ ಕಳೆದರೂ ಬ್ಯಾಂಕ್‌ಗಳ ತವರು ಎಂಬ ಹಣೆಪಟ್ಟಿ ಇದ್ದರೂ ಸ್ವಂತ ಡಿಸಿಸಿ ಬ್ಯಾಂಕ್ ಇಲ್ಲದಿರುವುದು, ಸರ್ಕಾರದ ಮೆಡಿಕಲ್‌ ಕಾಲೇಜು ಇಲ್ಲದಿರುವುದು ಬೇಸರದ ವಿಚಾರ. ಪ್ರವಾಸೋದ್ಯಮ ಹಾಗೂ ಮತ್ಸ್ಯೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಬೇಕು ಎಂದರು.

ಬಿಜೆಪಿ ಪ್ರಖರ ಹಿಂದುತ್ವ ರಾಜಕಾರಣವಾದರೆ, ಕಾಂಗ್ರೆಸ್‌ನದ್ದು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವಾಗಿದೆ. ಆದರೆ, ಆಮ್ ಆದ್ಮಿ ಪಕ್ಷ ಸಂವಿಧಾನ ಬದ್ಧವಾದ ಜಾತ್ಯತೀತ ತತ್ವ ಸಿದ್ಧಾಂತಗಳ ಮೇಲೆ ಸ್ಥಾಪನೆಯಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು.

ಆಮ್‌ ಆದ್ಮಿ ಪಕ್ಷ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ಸಾಲುಗಳ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಎಲ್ಲರಿಗೂ ಅವಕಾಶ ನೀಡಲಿದೆ. ದೆಹಲಿ, ಪಂಜಾಬ್‌ನಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಆಪ್‌ ದೇಶದಾದ್ಯಂತ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದರು.

ಆಮ್‌ ಆದ್ಮಿ ಜನಸಾಮಾನ್ಯರ ಪಕ್ಷವಾಗಿದ್ದು, ವಕೀಲರು, ವೈದ್ಯರು, ಎಂಜಿನಿಯರ್‌ಗಳು, ವ್ಯಾಪಾರಿಗಳು, ನಿವೃತ್ತ ನೌಕರರು ‌ಹಾಗೂ ಸಾಮಾನ್ಯರು ಸೇರಿ ಪಕ್ಷವನ್ನು ಬೆಳೆಸುತ್ತಿದ್ದಾರೆ. ಕರಾವಳಿಯಂತಹ ಬುದ್ಧಿವಂತರ ಜಿಲ್ಲೆಗೆ ಆಪ್‌ ಪಕ್ಷ ಸೂಕ್ತವಾಗಿದ್ದು ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಹೇಳಿಕೆಗೆ ಟೀಕೆ:

ಉಚಿತ ಕೊಡುಗೆಗಳ ಘೋಷಣೆ ದೇಶಕ್ಕೆ ಅಪಾಯಕಾರಿ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯಲ್ಲಿ ದೇಶದ ಮೇಲಿನ ಕಾಳಜಿಯ ಬದಲಾಗಿ ರಾಜಕೀಯ ಲೇವಡಿ ಕಾಣುತ್ತಿದೆ ಎಂದು ಆಪ್‌ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್ ರಾವ್ ಟೀಕಿಸಿದರು.

ಪ್ರತಿಯೊಬ್ಬರಿಗೂ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ, ಶಿಕ್ಷಣ, ವಿದ್ಯುತ್ ನೀಡುವುದು ಸರ್ಕಾರಗಳ ಕರ್ತವ್ಯ. ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು ಉಚಿತವಾಗಿ ಸರ್ಕಾರದ ಸೇವೆಗಳನ್ನು ಪಡೆಯಬಹುದಾದರೆ ಜನಸಾಮಾನ್ಯರಿಗೆ ಉಚಿತ ಕೊಡುಗೆಗಳನ್ನು ನೀಡುವುದರಲ್ಲಿ ತಪ್ಪೇನಿದೆ. ದೆಹಲಿ ಸರ್ಕಾರ ಅಲ್ಲಿನ ನಿವಾಸಿಗಳಿಗೆ ಉಚಿತ ಕೊಡುಗೆಗಳನ್ನು ನೀಡಿದರೂ ಆರ್ಥಿಕ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ ಎಂದು ಭಾಸ್ಕರ್ ರಾವ್ ಹೇಳಿದರು.

‘ಮೀನುಗಾರಿಕೆಗೆ ಹೊಸ ಸ್ವರೂಪ ಅಗತ್ಯ’

ಮೀನುಗಾರಿಕಾ ಉದ್ಯಮ ಹೊಸ ಸ್ವರೂಪ ಪಡೆಯಬೇಕು. ಮೀನುಗಾರರ ಆದಾಯ ದ್ವಿಗುಣವಾಗಬೇಕು. ಮೀನುಗಾರಿಕಾ ಉತ್ಪನ್ನಗಳ ರಫ್ತಿಗೆ ಒತ್ತು ನೀಡಬೇಕು. ಮೀನುಗಾರರ ಸಂಸ್ಕೃತಿ ಹಾಗೂ ಬದುಕಿಗೆ ಅಡ್ಡಿಯಾಗುವಂತಹ ಯಾವುದೇ ಯೋಜನೆಗಳು ಕರಾವಳಿಯಲ್ಲಿ ಜಾರಿಯಾಗಬಾರದು. ಸಣ್ಣ ಮೀನುಗಾರರ ಜೀವನ ಮಟ್ಟ ಸುಧಾರಣೆಯಾಗಬೇಕು, ಸರ್ಕಾರದ ಸವಲತ್ತುಗಳು ಮೀನುಗಾರರಿಗೆ ಸಿಗಬೇಕು. ಅಭಿವೃದ್ಧಿ ಹೆಸರಿನಲ್ಲಿ ಉದ್ಯಮಿಗಳಿಗೆ ಕಡಲ ಸಂಪತ್ತನ್ನು ದೋಚಲು ಅವಕಾಶ ನೀಡಬಾರದು ಎಂದು ಭಾಸ್ಕರ್ ರಾವ್ ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ದಿವಾಕರ್ ಸನೀಲ್, ಕಾರ್ಯದರ್ಶಿ ವಿವೇಕಾನಂದ ಸನೀಲ್, ಆಸ್ಲಿನ್ ಕರ್ನೆಲಿಯೊ, ವಿಭಾಗ ಪ್ರಮುಖ್ ಜೆ.ಪಿ.ರಾವ್, ಅಶೋಕ್ ಎಡಮಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.