ಕುಂದಾಪುರ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಗುರುವಾರ ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನವಾಲ ಅವರನ್ನು ಭೇಟಿಯಾಗಿ ಗಂಗೊಳ್ಳಿ ಸೇತುವೆ ಹಾಗೂ ಶಿರೂರು ಅಳಿವೆಗದ್ದೆಯಲ್ಲಿ ಸರ್ವಋತು ಬಂದರು ನಿರ್ಮಿಸಲು ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಎರಡನೇ ಅತಿದೊಡ್ಡ ಮೀನುಗಾರಿಕಾ ಬಂದರು ನೆಲೆಯಾಗಿರುವ ಗಂಗೊಳ್ಳಿ ಬಂದರಿನಲ್ಲಿ 200ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಇದೆ. ಮತ್ಸ್ಯೋದ್ಯಮ, ವ್ಯಾಪಾರ, ಜೀವನೋಪಾಯ ಮತ್ತು ಕರಾವಳಿಯ ವಾಣಿಜ್ಯ ವ್ಯವಹಾರಕ್ಕೆ ಗಂಗೊಳ್ಳಿ ಬಂದರು ಪ್ರಮುಖ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಗಂಗೊಳ್ಳಿಯಿಂದ ತಾಲ್ಲೂಕು ಕೇಂದ್ರವಾದ ಕುಂದಾಪುರ ಕೂಗಳತೆಯ ದೂರದಲ್ಲಿದ್ದರೂ, ಇಲ್ಲಿನ ಜನರು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 66 ಮೂಲಕ 17ರಿಂದ 18ಕಿ.ಮೀ. ಸುತ್ತು ಬಳಸಿ, ಕುಂದಾಪುರ ತಲುಪಬೇಕಾಗುತ್ತದೆ. ಇದರಿಂದ ಮೀನುಗಾರರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ನಿತ್ಯ ಪ್ರಯಾಣಿಕರ ಪ್ರಯಾಣದ ಸಮಯ ಮತ್ತು ದೂರವನ್ನು ಕಡಿಮೆ ಮಾಡಲು ಗಂಗೊಳ್ಳಿ-ಕುಂದಾಪುರ ಸೇತುವೆ ಯೋಜನೆಯನ್ನು ಸಾಗರಮಾಲಾ ಯೋಜನೆಯ ಬಂದರು ಸಂಪರ್ಕ ಘಟಕದಡಿಯಲ್ಲಿ ಸೇರಿಸಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಶಿಫಾರಸು ಮಾಡಲು ಹಾಗೂ ಈ ಮಹತ್ವದ ಯೋಜನೆಗಾಗಿ ಅಂತರ ಸಚಿವಾಲಯ ಸಮನ್ವಯ ಸಾಧಿಸುವಂತೆ ಸಂಸದರು ಭೇಟಿಯ ವೇಳೆ ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ಬೈಂದೂರು ತಾಲ್ಲೂಕಿನ ಶಿರೂರು ಅಳಿವೆಗದ್ದೆ ಬಂದರಿಗೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸುವುದರಿಂದ ಮೀನುಗಾರರ ಜೀವನೋಪಾಯವನ್ನು ಬೆಂಬಲಿಸಬಹುದು. ಈ ಮೂಲಕ ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸಿ, ಆ ಪ್ರದೇಶದ ದೊಡ್ಡ ಮೀನುಗಾರಿಕಾ ಸಮುದಾಯಕ್ಕೆ ನೇರವಾಗಿ ಪ್ರಯೋಜನವನ್ನು ನೀಡಬಹುದು ಎಂದು ಮನವಿ ಮಾಡಿದ ಅವರು, ಈ ಯೋಜನೆಗಳಿಂದ ಸಾಗರಮಾಲಾ ಯೋಜನೆಯ ಉದ್ದೇಶಗಳು ಈಡೇರಿ ಇಲ್ಲಿನ ಜನರ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಸಂಸದ ರಾಘವೇಂದ್ರ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಶೀಘ್ರವಾಗಿ ಬೇಡಿಕೆಗಳ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.
ಗಂಗೊಳ್ಳಿ -ಕುಂದಾಪುರ ಸೇತುವೆ ನಿರ್ಮಾಣದ ಕುರಿತು ‘ಪ್ರಜಾವಾಣಿ’ಯಲ್ಲಿ ಈಚೆಗೆ ವಿಸ್ತೃತ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.