ADVERTISEMENT

ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಬರೆದಿಲ್ಲ: ಶಿಕ್ಷಣ ಇಲಾಖೆ ಸುತ್ತೋಲೆಗೆ ಆಕ್ರೋಶ

ಬಿಜೆಪಿ ಸರ್ಕಾರದ ವಿರುದ್ಧ ಅಂಬೇಡ್ಕರ್ ಯುವಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 14:47 IST
Last Updated 14 ನವೆಂಬರ್ 2019, 14:47 IST
ಶಿಕ್ಷಣ ಇಲಾಖೆ ಸುತ್ತೋಲೆ ವಿರುದ್ಧ ಗುರುವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಅಂಬೇಡ್ಕರ್ ಯುವಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖಂಡ ಅಮೃತ್ ಶೆಣೈ ಮಾತನಾಡಿದರು.
ಶಿಕ್ಷಣ ಇಲಾಖೆ ಸುತ್ತೋಲೆ ವಿರುದ್ಧ ಗುರುವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಅಂಬೇಡ್ಕರ್ ಯುವಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖಂಡ ಅಮೃತ್ ಶೆಣೈ ಮಾತನಾಡಿದರು.   

ಉಡುಪಿ: ಸಂವಿಧಾನವನ್ನು ಅಂಬೇಡ್ಕರ್ ಅವರೊಬ್ಬರೇ ಬರೆದಿಲ್ಲ ಎಂಬ ಶಿಕ್ಷಣ ಇಲಾಖೆಯ ಸುತ್ತೋಲೆ ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್ ಯುವಸೇನೆ ಶಿಕ್ಷಣ ಇಲಾಖೆ ಸುತ್ತೋಲೆ ವಿರುದ್ಧ ಗುರುವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ಗೆ ಅವಮಾನ ಮಾಡಿದ ಬಿಜೆಪಿ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾತ್ರವಲ್ಲ, ಮುಂದಿನ ವಾರ ರಾಜ್ಯ ಬಂದ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೌಹಾರ್ದತೆ, ಸಹೋದರತ್ವ, ಸಾಮರಸ್ಯವನ್ನು ಭೋದಿಸುವ ಸಂವಿಧಾನಕ್ಕೆ ಅಪಚಾರ ಎಸಗಲಾಗುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು, ಒಪ್ಪದವರು ದೇಶಬಿಟ್ಟು ತೊಲಗಲಿ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಂವಿಧಾನಕ್ಕೆ ಅಪಚಾರ ಎಸಗುವುದು, ಸಂವಿಧಾನವನ್ನು ಬದಲಿಸುವಂತಹ ಕುತಂತ್ರಗಳು ನಡೆಯುತ್ತಲೇ ಇರುತ್ತವೆ. ಇದರ ಹಿಂದೆ ಆರ್‌ಎಸ್‌ಎಸ್‌ ಅಜೆಂಡಾ ಇದೆ ಎಂದು ಜಯನ್ ಮಲ್ಪೆ ಆರೋಪಿಸಿದರು.‌

ಕ್ರೈಸ್ತರಿಗೆ ಬೈಬಲ್‌, ಮುಸ್ಲಿಮರಿಗೆ ಖುರಾನ್ ಇರುವಂತೆ ದೇಶದ ಸಮಸ್ತರಿಗೆ ಸಂವಿಧಾನವೇ ಶ್ರೇಷ್ಠಗ್ರಂಥ. ಸಂವಿಧಾನದ ಆಶಯಗಳಿಗೆ ಧಕ್ಕೆಯಾದರೆ ಭಾರತ ಹರಿದು ಹಂಚಿಹೋಗಲಿದೆ ಎಂದು ಎಚ್ಚರಿಸಿದರು.

ಮುಖಂಡ ಅಮೃತ್ ಶೆಣೈ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ, ಸೌಹಾರ್ದತೆ, ಸಾಮರಸ್ಯದ ಸಿದ್ಧಾಂತಗಳ ಮೇಲೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ವಿಶ್ವದ ಶ್ರೇಷ್ಠ ಗ್ರಂಥ. ಇದಕ್ಕೆ ಅಪಚಾರ ಎಸಗುವುದು ಖಂಡನೀಯ ಎಂದರು.

ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಅಧಿಕಾರಕ್ಕೇರಿದ ಬಿಜೆಪಿ ಸಂವಿಧಾನವನ್ನೇ ಬದಲಿಸಲು ಹೊರಟಿದೆ. ಇತಿಹಾಸವನ್ನು ಮರೆಮಾಚುವ ಸಂಚು ನಡೆಯುತ್ತಿದೆ. ಅಸ್ಪೃಶ್ಯತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದರು.

ಈ ಸಂದರ್ಭ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಸುಂದರ್ ಕಪ್ಪೆಟ್ಟು, ಸಿರಿಲ್ ಮಥಾಯಿಸ್‌ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.