
ಉಡುಪಿ: ಬೆಲ್ಟ್ ಕುಸ್ತಿಯು ಅಪರೂಪದ ಕ್ರೀಡೆಯಾಗಿದ್ದು, ಅದನ್ನು ಜಿಲ್ಲೆಗೆ ಪರಿಚಯಿಸುವ ನಿಟ್ಟಿನಲ್ಲಿ ಟೂರ್ನಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಕ್ರೀಡೆಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ನಮ್ಮ ಮಿತಿಗಳನ್ನು ಅರಿತುಕೊಂಡು ಸತತ ಪ್ರಯತ್ನ ಮಾಡಿದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯ. ಒಂದು ರಾತ್ರಿ ಒಂದು ಹಗಲಲ್ಲಿ ಯಾರ ಬದುಕೂ ರೂಪುಗೊಳ್ಳುವುದಿಲ್ಲ. ಅದಕ್ಕಾಗಿ ಕಠಿಣ ಶ್ರಮ ಅಗತ್ಯ. ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಕಠಿಣ ಶ್ರಮ ವಹಿಸಿ ರಾಜ್ಯ ಮಟ್ಟದಲ್ಲಿ ಮಿಂಚಬೇಕು ಎಂದರು.
ಪಾಶ್ಚಾತ್ಯ ದೇಶಗಳಲ್ಲಿ ಸಾಂಸಾರಿಕ, ಸಾಂಸ್ಕೃತಿಕ ವ್ಯವಸ್ಥೆ ಸರಿ ಇಲ್ಲದಿರುವುದರಿಂದ ಅಲ್ಲಿನ ಮಕ್ಕಳು ದಾರಿ ತಪ್ಪುತ್ತಾರೆ. ಇದರಿಂದಾಗಿ ನಮ್ಮಲ್ಲಿನ ಅಧ್ಯಾತ್ಮ, ಕಲಿಕೆಯ ರೀತಿಯ ಕಡೆಗೆ ಅವರು ಮುಖಮಾಡುತ್ತಿದ್ದಾರೆ. ಆದರೆ ನಾವು ಅವರ ಕಡೆಗೆ ಮುಖಮಾಡುತ್ತಿದ್ದೇವೆ ಎಂದು ಹೇಳಿದರು.
ಅಧ್ಯಯನ, ಅನುಸಂಧಾನ ಒಟ್ಟೊಟ್ಟಿಗೆ ಸಾಗಬೇಕು. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಹಿರಿಯರು ಮಾಡಬೇಕು ಎಂದು ತಿಳಿಸಿದರು.
ಕಟಪಾಡಿಯ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿ.ಎ. ಗೋಪಾಲಕೃಷ್ಣ ಭಟ್ ಮಾತನಾಡಿ, ಬೆಲ್ಟ್ ಕುಸ್ತಿ ಪಾರಂಪರಿಕ ಕ್ರೀಡೆಯಾಗಿದೆ. ರಾಜ ಮಹಾರಾಜರ ಕಾಲದಿಂದಲೂ ಅದು ಇತ್ತು. ಆದರೆ ಈ ಕ್ರೀಡೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ನಡೆದಿಲ್ಲ. ಕೆಲ ವರ್ಷಗಳಿಂದಷ್ಟೇ ರಾಜ್ಯದಲ್ಲಿ ಅದಕ್ಕೆ ಪ್ರೋತ್ಸಾಹ ಸಿಗುತ್ತಿದೆ ಎಂದರು.
ಈ ಕ್ರೀಡೆಯನ್ನು ಉಳಿಸಲು ಎಲ್ಲರೂ ಶ್ರಮ ವಹಿಸಬೇಕು. ವಿದ್ಯಾರ್ಥಿಗಳು ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಮಾರುತಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್ಟ, ಕಾರ್ಯದರ್ಶಿ ರಮೇಶ್ ಎಸ್.ಸಿ., ಕ್ರೀಡಾ ಸಂಚಾಲಕ ಸಂತೋಷ, ದಿನೇಶ್ ಕುಮಾರ್ ಎ., ಜೀವನ್ ಕುಮಾರ್ ಶೆಟ್ಟಿ, ಸತೀಶ ಹೆಗ್ಡೆ, ಹರಿಪ್ರಸಾದ್, ಶಶಿಕಿರಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.