ADVERTISEMENT

‘ಬದ್ಧತೆಯೊಂದಿಗೆ ಸಂಯಮ ಬೆಳೆಸಿಕೊಳ್ಳಿ’

ಬಿಜೆಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:21 IST
Last Updated 4 ಅಕ್ಟೋಬರ್ 2025, 7:21 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಶಿಲಾನ್ಯಾಸ ನೆರವೇರಿಸಿದರು
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಶಿಲಾನ್ಯಾಸ ನೆರವೇರಿಸಿದರು   

ಉಡುಪಿ: ಪಕ್ಷದ ಕಾರ್ಯಕರ್ತರಿಗೆ ಬದ್ಧತೆಯಷ್ಟೇ ಇದ್ದರೆ ಸಾಲದು. ಬದ್ಧತೆಯೊಂದಿಗೆ ಸಂಯಮವೂ ಇರಬೇಕು. ಸಂಯಮ ಇರದಿದ್ದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.

ನಗರದ ಗುಂಡಿಬೈಲ್‌ನಲ್ಲಿ ಬಿಜೆಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪಕ್ಷ ಬೆಳೆಯಬೇಕು, ಕಾರ್ಯಕರ್ತರು ಬೆಳೆಯಬೇಕು ಜೊತೆಗೆ ರಾಜಕೀಯವಾಗಿ ಸಾಮಾಜಿಕವಾಗಿ ಪ್ರತಿಷ್ಠೆಯೂ ಬೆಳೆಯಬೇಕು ಎಂದು ಅವರು ತಿಳಿಸಿದರು.

ADVERTISEMENT

ಗಂಗಾನದಿಯು ಬೇರೆ ಬೇರೆ ನದಿಗಳು ಸೇರಿ ಬೆಳೆದಂತೆ ಇಂದು ಬಿಜೆಪಿ ಪಕ್ಷವೂ ಬೆಳೆಯುತ್ತಿದೆ. ಗಿಡಗಳಿಗೂ ಕೆಲವೊಮ್ಮೆ ಕಸಿ ಕಟ್ಟಬೇಕಾಗುತ್ತದೆ. ಹಾಗೆಯೇ ಬೇರೆ ಬೇರೆ ಪಕ್ಷಗಳಿಂದ ಬಂದು ನಮ್ಮ ಪಕ್ಷಕ್ಕೆ ವೈಚಾರಿಕವಾಗಿ, ರಾಜಕೀಯವಾಗಿ ಹಲವು ಜನರು ಸೇರಿಕೊಂಡಿದ್ದಾರೆ ಎಂದರು.

ಕಾರ್ಯಾಲಯ ನಿರ್ಮಿಸುವ ಯೋಜನೆ ಇಡೀ ದೇಶದಲ್ಲಿ ನಡೆಯುತ್ತಿದೆ. ಇಂದು ದೇಶದ 700 ಕ್ಕೂ ಹೆಚ್ಚು ಸಂಘಟನಾ ಜಿಲ್ಲೆಗಳಲ್ಲಿ ಪಕ್ಷಕ್ಕೆ ಕಾರ್ಯಾಲಯಗಳಿವೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಕಾರ್ಯಾಲಯ ನಿರ್ಮಾಣವಾಗಬೇಕಿದೆ ಎಂದರು.

ಕಾರ್ಯಾಲಯಗಳು ಕಾರ್ಯದ ಆಲಯಗಳಾಗಬೇಕು. ಅದು ಕಾರ್ಯಕರ್ತರ ಚಟುವಟಿಕೆಯ ಕೇಂದ್ರಗಳಾಗಬೇಕು ಎಂದು ಹೇಳಿದರು.

18 ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭವಾಗುವ ವಿಶ್ವಾಸವಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇದೇ ಕಟ್ಟಡದಿಂದ ಕಾರ್ಯನಿರ್ವಹಿಸುವ ಸಂಕಲ್ಪ ಇದೆ ಎಂದರು.

ಜಿಲ್ಲೆಯ ಬಿಜೆಪಿ ಶಾಸಕರು, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಬೋಳ ಪ್ರಭಾಕರ ಕಾಮತ್‌, ಗುಜ್ಜಾಡಿ ಪ್ರಭಾಕರ ನಾಯಕ್‌, ಶೀಲಾ ಶೆಟ್ಟಿ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡದಲ್ಲಿ ಕಾರ್ಯಕರ್ತರಿಗೆ ವಸತಿ ವ್ಯವಸ್ಥೆ ಕಾರ್ಯಕಾರಿಣಿ ನಡೆಸಲು ಸಭಾಂಗಣ ಕೂಡ ಇರಲಿದೆ.
ಕುತ್ಯಾರು ನವೀನ್ ಶೆಟ್ಟಿ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.