ಬ್ರಹ್ಮಾವರ: ‘ಅಟಲ್ ಬಿಹಾರಿ ವಾಜಪೇಯಿ ಅವರು, ಸಮಾಜಕ್ಕೆ ಮತ್ತು ರಾಜಕೀಯಕ್ಕೆ ಆದರ್ಶ ಬದುಕಿನ ಮಾರ್ಗ ತೋರಿಸಿಕೊಟ್ಟವರು. ಅವರ 100ನೇ ಜನ್ಮದಿನೋತ್ಸವ ಭಾರತದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಜಾಗೃತಿ ಉಂಟುಮಾಡುತ್ತಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಮಾಂಗಲ್ಯ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿ ಕೋಟ ಮತ್ತು ಕೋಟತಟ್ಟು ಶಕ್ತಿ ಕೇಂದ್ರದ ವತಿಯಿಂದ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಟಲ್ ಜಿ. ಅವರ ಕಾಲದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿದ್ದು, ಮೋದಿಜಿ ಅವರ ಕಾಲದಲ್ಲೂ ಮುಂದುವರೆಯುತ್ತಿದೆ. ಜಾತಿ, ಧರ್ಮಕ್ಕಿಂತ, ನನ್ನ ದೇಶ ಮೊದಲು ಎನ್ನುವ ಹೃದಯಗಳಿಗೆ ಶಕ್ತಿ ನೀಡಿದೆ’ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ಚಿಂತಕ ಹಾಗೂ ಲೇಖಕ ಪ್ರಕಾಶ ಮಲ್ಪೆ, ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ ಕುಂದರ್, ಪ್ರದಾನ ಕಾರ್ಯದರ್ಶಿ ಅಜಿತ ಶೆಟ್ಟಿ ಕೊತ್ತಾಡಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ಬಾರಿಕೆರೆ, ವಡ್ದರ್ಸೆ ಪಂಚಾಯಿತಿ ಅಧ್ಯಕ್ಷ ಲೋಕೇಶ ಕಾಂಚನ್, ಹಿರಿಯರಾದ ಸುರೇಂದ್ರ ಹೆಗ್ಡೆ, ಕೋಟತಟ್ಟು ಶಕ್ತಿ ಕೇಂದ್ರ ಅಧ್ಯಕ್ಷ ಪ್ರಮೋದ ಹಂದೆ, ಕೋಟ ಶಕ್ತಿ ಕೇಂದ್ರ ಅಧ್ಯಕ್ಷ ಅಜಿತ ದೇವಾಡಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.