ADVERTISEMENT

ಡೆಲಿವರಿ ಪಾಯಿಂಟ್‌ನಲ್ಲಿ ಕರ ರಹಿತ ಡೀಸೆಲ್‌ಗೆ ಅಸ್ತು

ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ

ಪ್ರಜಾವಾಣಿ ವಿಶೇಷ
Published 8 ಮಾರ್ಚ್ 2021, 14:57 IST
Last Updated 8 ಮಾರ್ಚ್ 2021, 14:57 IST
ಮಲ್ಪೆ ಬಂದರು
ಮಲ್ಪೆ ಬಂದರು   

ಉಡುಪಿ: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ ಸಿಕ್ಕಿದೆ.

ಜಿಲ್ಲೆಗೆ ಸಿಕ್ಕಿದ್ದೇನು?

ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್‌ ಮೇಲಿನ ಮಾರಾಟ ಕರ ಮರುಪಾವತಿ ಬದಲಾಗಿ ಡೆಲಿವರಿ ಪಾಯಿಂಟ್‌ನಲ್ಲಿ ಕರ ರಹಿತ ಡೀಸೆಲ್ ನೀಡಬೇಕು ಎಂಬುದು ಮೀನುಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಈಚೆಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ಮುಖಂಡರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಮಾಡಿ ಕರ ರಹಿತ ಡೀಸೆಲ್‌ಗೆ ಹಾಗೂ ಡೀಸೆಲ್ ಪ್ರಮಾಣವನ್ನು 300 ಲೀಟರ್‌ನಿಂದ 400 ಲೀಟರ್‌ಗೆ ಹೆಚ್ಚಿಸುವಂತೆ ಮನವಿ ಮಾಡಿತ್ತು. ಈ ಬೇಡಿಕೆಗೆ ಬಜೆಟ್‌ನಲ್ಲಿ ಗ್ರೀನ್‌ಸಿಗ್ನಲ್ ಸಿಕ್ಕಿದೆ. ಆದರೆ, ಡೀಸೆಲ್ ಪ್ರಮಾಣ ಹೆಚ್ಚಳ ಮಾಡಲಾಗಿಲ್ಲ.

ADVERTISEMENT

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಕಾರ್ಯಕ್ರಮ ಅನುಷ್ಠಾನಕ್ಕೆ ₹ 62 ಕೋಟಿ ಮೀಸಲಿಡಲಾಗಿದೆ. ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ₹ 6 ಕೋಟಿ ವೆಚ್ಚದಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಹಾಗೂ ಮೌಲ್ಯವರ್ಧನಾ ಕೇಂದ್ರ ಸ್ಥಾಪನೆ, ₹ 50 ಕೋಟಿ ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯದರ್ಶಿನಿಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ.

ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರೆ ಕಡಲ ತೀರಗಳನ್ನು ಅಂತರರಾಷ್ಟ್ರೀಯ ದರ್ಜೆಯಲ್ಲಿ ಸಮಗ್ರ ಅಭಿವೃದ್ಧಿಗೆ ₹ 10 ಕೋಟಿ, ಬೈಂದೂರು ತಾಲ್ಲೂಕಿನ ಸೋಮೇಶ್ವರ ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 10 ಕೋಟಿ ಮೀಸಲಿಡಲಾಗಿದೆ.

ಪಶ್ಚಿಮ ವಾಹಿನಿ ಯೋಜನೆಯಡಿ 5 ವರ್ಷಗಳಲ್ಲಿ 3986 ಕೋಟಿ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 2021–22ನೇ ಸಾಲಿನಲ್ಲಿ ₹ 500 ಕೋಟಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದರಿಂದ ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸುವುದರ ಜತೆಗೆ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯನ್ನಾಗಿ ಬದಲಾಯಿಸಲು ನಿರ್ಧಾರ, ಮಲೆನಾಡು ಹಾಗೂ ಕರಾವಳಿಯಲ್ಲಿ 100 ಕೋಟಿ ವೆಚ್ಚದಲ್ಲಿ ಕಾಲುಸಂಕಗಳ ನಿರ್ಮಾಣ ಮಾಡಲು ’ಗ್ರಾಮಬಂಧ ಸೇತುವೆ’ ಕಾರ್ಯಕ್ರಮ ಅನುಷ್ಠಾನ ಮಾಡುವುದಾಗಿ ಸರ್ಕಾರ ಹೇಳಿದೆ.

ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಹಾಗೂ ವಿಶ್ವೇಶ್ವರ ತೀರ್ಥ ಶ್ರೀಗಳ ಸ್ಮೃತಿ ವನ ನಿರ್ಮಾಣಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಎರಡೂ ಬೇಡಿಕೆಗಳಿಗೆ ಪುರಸ್ಕಾರ ಸಿಕ್ಕಿದ್ದು, ಯಾತ್ರಿ ನಿವಾಸಕ್ಕೆ ₹ 10 ಕೋಟಿ ಹಾಗೂ ಉಡುಪಿಯಲ್ಲಿ ಸ್ಮೃತಿ ವನ ನಿರ್ಮಾಣಕ್ಕೆ ₹ 2 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ.

ನಿರೀಕ್ಷೆಗಳು ಏನಿತ್ತು ?

ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಬೇಕು ಎಂಬ ಬಹುದಿನಗಳ ಬೇಡಿಕೆ ಈ ಬಾರಿಯೂ ಈಡೇರಿಲ್ಲ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಕ್ಕಿಲ್ಲ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಾಯಕಲ್ಪ ನೀಡಲು ಸರ್ಕಾರ ಮನಸ್ಸು ಮಾಡಿಲ್ಲ. ಸಂಕಷ್ಟದಲ್ಲಿರುವ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ.

ಕೃಷಿ ಕ್ಷೇತ್ರದ ನಿರ್ಲಕ್ಷ್ಯ:

ಜಿಲ್ಲೆಯ ಕೃಷಿ ಕ್ಷೇತ್ರವನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಲಾಗಿದೆ ಎಂಬ ಅಸಮಾಧಾನಗಳು ಕೇಳಿಬಂದಿವೆ. ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆಗೆ ಶೀಥಲೀಕರಣ ಘಟಕ ಬೇಡಿಕೆ ಈಡೇರಿಲ್ಲ. ಬಂದರುಗಳ ಹೂಳೆತ್ತುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.