ADVERTISEMENT

ಮಕ್ಕಳಿಗೆ ಕಲೆ, ಸಾಹಿತ್ಯ ಅಭಿರುಚಿ ಮೂಡಿಸಿ: ಗೋವಿಂದಬಾಬು ಪೂಜಾರಿ

‘ಸುರಭಿ ಜೈಸಿರಿ– 2026’ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಸಾಂಸ್ಕೃತಿಕೋತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:36 IST
Last Updated 21 ಫೆಬ್ರುವರಿ 2026, 8:36 IST
ಉಪ್ಪುಂದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಸುರಭಿ ಜೈಸಿರಿ ಸಾಂಸ್ಕೃತಿಕೋತ್ಸವ ಉದ್ಘಾಟಿಸಿದರು
ಉಪ್ಪುಂದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಸುರಭಿ ಜೈಸಿರಿ ಸಾಂಸ್ಕೃತಿಕೋತ್ಸವ ಉದ್ಘಾಟಿಸಿದರು   

ಬೈಂದೂರು: ‘ಕಲೆ, ಸಾಹಿತ್ಯ, ಸಂಸ್ಕೃತಿ ಮನುಷ್ಯನ ಬೆಳವಣಿಗೆಗೆ ಸಹಾಯಕ. ಅವುಗಳ ಬಗ್ಗೆ ಮಕ್ಕಳಿಗೆ ಎಳವೆಯಲ್ಲೇ ಅಭಿರುಚಿ ಮೂಡಿಸಬೇಕು. ಮಕ್ಕಳಲ್ಲಿ ಸಹಜವಾಗಿ ವಿವಿಧ ಕಲೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಉಪ್ಪುಂದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದಬಾಬು ಪೂಜಾರಿ ಹೇಳಿದರು.

ಇಲ್ಲಿನ ಶಾರದಾ ವೇದಿಕೆಯಲ್ಲಿ ಶನಿವಾರ ನಡೆದ ಸುರಭಿ ಬೈಂದೂರು ಸಾಂಸ್ಕೃತಿಕ, ಸಾಹಿತ್ಯ, ಸೇವಾ ಪ್ರತಿಷ್ಠಾನದ ‘ಸುರಭಿ ಜೈಸಿರಿ– 2026’ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ದಿ.ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣೆಯ ಸಾಂಸ್ಕೃತಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಬೆಳೆದು ಬರಲು ಇಂತಹ ಸಂಸ್ಥೆಗಳು ಅವಶ್ಯಕ ಎಂದರು. 

ಶಿವರಾಮ ಕಾರಂತ ಬಾಲ ಪ್ರಶಸ್ತಿ ಪುರಸ್ಕೃತ ಕೃತಿಕಾ ಕೃಷ್ಣ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ದಾರಿಮಕ್ಕಿ ಪ್ರಶಾಂತ್ ಮಯ್ಯ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ADVERTISEMENT

ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸತೀಶ ಬಟವಾಡಿ, ಧೃತಿ ಸರ್ಜಿಕಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶರತ್ ಕುಮಾ‌ರ್ ಶೆಟ್ಟಿ ಉಪ್ಪುಂದ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಧನಾಕ್ಷಿ ವಿಶ್ವನಾಥ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ ಕುಮಾರ್ ಶಿರೂರು, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಮೋಹನ ರೇವಣ್ಕರ್, ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದೊಟ್ಟಯ್ಯ ಪೂಜಾರಿ ಭಾಗವಹಿಸಿದ್ದರು.

ಸುರಭಿ ನಿರ್ದೇಶಕ ಸುಧಾಕರ್ ಪಿ. ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಶ್ರೀಧರ್ ಆಚಾರ್ಯ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ಬಾಡ, ಉದಯ್ ಕುಮಾರ್ ನಿರೂಪಿಸಿದರು. ಸುರಭಿಯ ಬಾಲ ಯಕ್ಷ ಕಲಾವಿದರಿಂದ ‘ಕನಕಾಂಗಿ ಕಲ್ಯಾಣ’, ಸುರಭಿ ಯಕ್ಷ ಕಲಾವಿದರಿಂದ ‘ಧರ್ಮಾಂಗದ ದಿಗ್ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.