ADVERTISEMENT

ಕಡಲ್ಕೊರೆತ|ಅನುದಾನ ವ್ಯಯವಾದರೂ ಸಮಸ್ಯೆಗೆ ಸಿಗದ ಮುಕ್ತಿ:ಶಾಶ್ವತ ಪರಿಹಾರ ನಿರೀಕ್ಷೆ

ನವೀನ್ ಕುಮಾರ್ ಜಿ.
Published 7 ಜನವರಿ 2026, 3:00 IST
Last Updated 7 ಜನವರಿ 2026, 3:00 IST
ಕಾಪು ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಡಲ್ಕೊರೆತ 
ಕಾಪು ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಡಲ್ಕೊರೆತ    

ಉಡುಪಿ: ಪ್ರತಿ ಮಳೆಗಾಲದಲ್ಲೂ ಜಿಲ್ಲೆಯ ತೀರ ಪ್ರದೇಶದ ಜನರನ್ನು ಕಂಗೆಡಿಸುವ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಅನುದಾನಗಳು ವ್ಯಯವಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ಹಲವು ವರ್ಷಗಳಿಂದ ಕಡಲ್ಕೊರೆತದ ಪರಿಣಾಮವಾಗಿ ತೆಂಗಿನ ಮರಗಳು ಕಡಲಿನ ಒಡಲು ಸೇರುತ್ತಿವೆ. ಸಮುದ್ರ ಬದಿಯ ರಸ್ತೆಗಳೂ ಕೆಲವೆಡೆ ತೆರೆಗಳ ಹೊಡೆತಕ್ಕೆ ಕೊಚ್ಚಿ ಹೋಗಿವೆ.

ಕಡಲ್ಕೊರೆತ ತಡೆಯಲು ಸಮುದ್ರದ ತಟಕ್ಕೆ ಬಂಡೆಗಳನ್ನು ಸುರಿದರೆ ಸಾಲದು ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮೀಸಲಿರಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಯೋಜನೆ ರೂಪಿಸಬೇಕೆಂಬ ಬೇಡಿಕೆ ತೀರವಾಸಿಗಳಿಂದ ಕೇಳಿ ಬಂದಿವೆ.

ADVERTISEMENT

ಉಡುಪಿ, ಕಾಪು, ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ ವಿವಿಧೆಡೆ ಪ್ರತಿ ಮಳೆಗಾಲದಲ್ಲಿಯೂ ಕಡಲ್ಕೊರೆತ ಸಂಭವಿಸುತ್ತದೆ. ಕಡಲ್ಕೊರೆತ ತಡೆಗೆ ಈಗಾಗಲೇ ಕೋಟ್ಯಂತರ ರೂಪಾಯಿ ವಿನಿಯೋಗಿಸಿದ್ದರೂ ಅದು ಸಮುದ್ರ ಪಾಲಾಗಿದೆ ಎಂಬುದು ಜನರ ಆರೋಪ.

ಕೆಲವೆಡೆ ಕಡಲ್ಕೊರೆತ ತಡೆಗೆ ತ್ರಿಕೋನ ಆಕಾರದ ಕಾಂಕ್ರಿಟ್‌ ಬ್ಲಾಕ್‌ಗಳನ್ನು (ಟೆಟ್ರಾ ಪಾಡ್) ಹಾಕಲಾಗಿದೆ. ಈ ವಿಧಾನವು ಮಹಾರಾಷ್ಟ್ರದ ಮುಂಬೈ ಮೊದಲಾದೆಡೆ ಕಡಲ್ಕೊರೆತ ತಡೆಯುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲೂ ಪ್ರಮುಖವಾಗಿ ಕಡಲ್ಕೊರೆತ ಸಂಭವಿಸುವಲ್ಲಿ ಅಳವಡಿಸಬೇಕೆಂಬ ಬೇಡಿಕೆಯೂ ಜನರಿಂದ ಕೇಳಿ ಬಂದಿದೆ.

ಟೆಟ್ರಾ ಪಾಡ್ ಹಾಕಲು ಅಧಿಕ ವೆಚ್ಚ ತಗಲುವ ಕಾರಣ ಅದನ್ನು ಎಲ್ಲಾ ಕಡೆ ಹಾಕಿಲ್ಲ ಎಂದೂ ಸಂಬಂಧಪಟ್ಟವರು ಹೇಳಿದ್ದಾರೆ. ಇಂತಹ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಲು ಬಜೆಟ್‌ನಲ್ಲಿ ಹೆಚ್ಚು ಮೊತ್ತ ಘೋಷಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಅಂತರರಾಷ್ಟ್ರೀಯ ಮಾನ್ಯತೆ ಪಡೆದಿರುವ ಪಡುಬಿದ್ರಿಯ ಬ್ಲ್ಯೂಫ್ಲ್ಯಾಗ್‌ ಬೀಚ್‌ನಲ್ಲೂ ಎರಡು ವರ್ಷಗಳ ಹಿಂದೆ ಕಡಲ್ಕೊರೆತ ಸಂಭವಿಸಿತ್ತು. ಇದರಿಂದ ಬೀಚ್‌ ಪರಿಸರದಲ್ಲಿ ಅಳವಡಿಸಿದ್ದ ಇಂಟರ್‌ಲಾಕ್‌ ಮೊದಲಾದವುಗಳಿಗೆ ಹಾನಿಯಾಗಿತ್ತು.

ಜಿಲ್ಲೆಯಲ್ಲಿ 98 ಕಿ.ಮೀ. ಕಡಲ ತೀರವಿದ್ದು, 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಕಡಲ್ಕೊರೆತ ಸಂಭವಿಸುತ್ತಿದೆ. ಕಡಲ್ಕೊರೆತ ತಡೆಗೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸದೆ, ಬಂಡೆಗಲ್ಲುಗಳನ್ನು ತೀರಕ್ಕೆ ಹಾಕಿ ಪ್ರಯೋಜನವಿಲ್ಲ ಎನ್ನುತ್ತಾರೆ ಜನರು.

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ರೂಪಿಸಲು ಐಐಟಿ ಮದ್ರಾಸ್‌ ತಜ್ಞರ ವರದಿಯ ಆಧಾರದ ಮೇಲೆ ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುವುದು ಎಂಬ ಭರವಸೆ ಸಂಬಂಧಪಟ್ಟವರಿಂದ ಸಿಕ್ಕಿದ್ದರೂ ಅದು ಇನ್ನೂ ಪೂರ್ಣರೂಪದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ತೀರವಾಸಿಗಳು.

ಕಡಲ್ಕೊರೆತ ತಡೆಯಲು ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಿಸುವ ಜೊತೆಗೆ ನೈಸರ್ಗಿಕ ತಡೆಗೋಡೆಯಾಗಬಲ್ಲ ಕಾಂಡ್ಲಾ ವನ ಮತ್ತು ಬಿದಿರು ಕಾಡುಗಳನ್ನು ಬೆಳೆಸುವ ನಿಟ್ಟಿನಲ್ಲೂ ಚಿಂತನೆ ನಡೆಸಬೇಕೆಂಬ ಬೇಡಿಕೆಗಳೂ ಕೇಳಿ ಬಂದಿದ್ದವು.

‘ವೈಜ್ಞಾನಿಕ ಕಾಮಗಾರಿ ಅಗತ್ಯ’

‘ಕಡಲ್ಕೊರೆತ ತಡೆಗಟ್ಟಲು ತಜ್ಞರ ಅಧ್ಯಯನ ವರದಿಗಳನ್ನು ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗಳನ್ನು ನಡೆಸಲು ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿರಿಸಬೇಕು’ ಎಂದು ಪರಿಸರ ತಜ್ಞ ಪ್ರೊ. ವಿ. ಲಕ್ಷೀನಾರಾಯಣ ಉಪಾಧ್ಯ ಹೇಳಿದರು. ‘ಕೆಲವೆಡೆ ಸಮುದ್ರ ತೀರದಲ್ಲಿ ಟೆಟ್ರಾಪಾಡ್‌ಗಳನ್ನು ಅಳವಡಿಸಲಾಗಿದೆ. ಇದರ ನಡುವೆ ಕಾಂಡ್ಲಾ ಗಿಡಗಳನ್ನೂ ನೆಡಬೇಕು. ಹಿನ್ನೀರು ಪ್ರದೇಶದಲ್ಲಿ ಸವಕಳಿ ತಡೆಯುವಲ್ಲಿ ಕಾಂಡ್ಲಾ ವನಗಳು ಪ್ರಮುಖ ಪಾತ್ರವಹಿಸುತ್ತವೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.