ADVERTISEMENT

ಉಡುಪಿ: ತೆಂಗಿನ ಚಿಪ್ಪಿನ ಕಾಮಾನಿನ ಸ್ವಾಗತ

ಅದಮಾರು ಪರ್ಯಾಯ ಭರದ ಸಿದ್ಧತೆ; ಕೊರಗ ಸಮುದಾಯದ ಯುವಕರ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 19:45 IST
Last Updated 11 ಜನವರಿ 2020, 19:45 IST
ಅದಮಾರು ಪರ್ಯಾಯಕ್ಕೆ ಸಜ್ಜುಗೊಂಡಿರುವ ತೆಂಗಿನ ಚಿಪ್ಪಿನ ಸ್ವಾಗತ ಕಾಮಾನುಪ್ರಜಾವಾಣಿ ಚಿತ್ರ
ಅದಮಾರು ಪರ್ಯಾಯಕ್ಕೆ ಸಜ್ಜುಗೊಂಡಿರುವ ತೆಂಗಿನ ಚಿಪ್ಪಿನ ಸ್ವಾಗತ ಕಾಮಾನುಪ್ರಜಾವಾಣಿ ಚಿತ್ರ   

ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಸ್ವಾಗತಕಮಾನುಗಳು ಪರ್ಯಾಯದ ವೈಭವಕ್ಕೆ ಮೆರಗು ನೀಡುತ್ತಿವೆ. ರಥಬೀದಿಗೆ ಸಂಪರ್ಕಿಸುವ ತೆಂಕಪೇಟೆ ಮಾರ್ಗದಲ್ಲಿ ತೆಂಗಿನ ಚಿಪ್ಪುಗಳಿಂದ ಶೃಂಗಾರಗೊಂಡಿರುವ ಬೃಹತ್‌ ಸ್ವಾಗತಕಮಾನುಜನರನ್ನು ಆಕರ್ಷಿಸುತ್ತಿದೆ.

ಏನಿದರ ವಿಶೇಷ

ನಗರದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅವಳಡಿಸಲಾಗಿರುವ ಸ್ವಾಗತ ಗೋಪುರಗಳು, ಕಮಾನುಗಳು ಕರಾವಳಿಯ ಸಂಸ್ಕೃತಿ, ಪರಂಪರೆ, ಕಲೆ, ಉತ್ತರ ಭಾರತ ಶೈಲಿಯನ್ನು ಬಿಂಬಿಸಿದರೆ, ತೆಂಕಪೇಟೆಯ ಸ್ವಾಗತಕಮಾನುಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿದೆ.

ADVERTISEMENT

ಕಸವನ್ನು ರಸವನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ತೆಂಗಿನ ಚಿಪ್ಪಿನಲ್ಲಿ ಮಾಡಿರುವ ಈ ಕಮಾನು ನಿದರ್ಶನವಾಗಿದ್ದು, ಪ್ರವಾಸಿಗರನ್ನು ಹಾಗೂ ಸ್ಥಳೀಯರ ಕುತೂಹಲದ ಕೇಂದ್ರವಾಗಿದೆ. ಮಠಕ್ಕೆ ಹೋಗುವವರು ರಸ್ತೆಯಲ್ಲಿ ಸಾಗುವರರು ಕೊರಗರ ಕಲೆಯನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕೊರಗ ಯುವಕರ ಕುಸರಿ ಕಾರ್ಯ

ಕೊರಗ ಯುವ ಸಂಘಟನೆಯ ಸುದರ್ಶನ್‌ ಕೋಟ ಹಾಗೂ ಶರತ್‌ ಕುಂಭಾಶಿ ನೇತೃತ್ವದ ತಂಡ ಈ ಕಾಮಾನಿನ ವಿನ್ಯಾಸ ಮಾಡಿದೆ. ಕುಸರಿ ಕಾರ್ಯವನ್ನು ಕುಂಭಾಶಿಯಲ್ಲಿ ಮಾಡಲಾಗಿದ್ದು, ಉಡುಪಿಗೆ ತಂದು ಜೋಡಣೆ ಮಾಡಲಾಗಿದೆ.

ಈ ಸುಂದರ ಕಮಾನು ನಿರ್ಮಾಣಕ್ಕೆ 9 ದಿನಗಳು ಹಿಡಿದಿದ್ದು, 5 ದಿನ ಹಗಲಿನ ಹೊತ್ತು ಹಾಗೂ 4 ದಿನ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಯುವಕರ ಶ್ರಮದ ಫಲವಾಗಿ ಕಲಾತ್ಮಕವಾದಕಮಾನುನಿರ್ಮಾಣವಾಗಿದ್ದು, ಜನರ ಗಮನ ಸೆಳೆಯುತ್ತಿದೆ.

ಕೊರಗ ಯುವ ಸಂಘಟನೆ ಈಗಾಗಲೇ ಬೀಚ್‌ ಉತ್ಸವ, ಧಾರ್ಮಿಕ ಉತ್ಸವ, ಜಾತ್ರೆಗಳಲ್ಲಿ ಕಲಾತ್ಮಕ ಮತ್ತು ಸಾಂಪ್ರದಾಯಿಕ ರೀತಿಯ ವಿನ್ಯಾಸಗಳನ್ನು ತಯಾರಿಸಿದ್ದಾರೆ. ವೇದಿಕೆ ಅಲಂಕಾರ, ಸ್ವಾಗತ ಕಮಾನು ಹಾಗೂ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಕೊಂಡು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.

ವಿವಿಧ ವಿನ್ಯಾಸದ ಹಾಗೂ ಗಾತ್ರದ ಬುಟ್ಟಿಗಳನ್ನು ಹೆಣೆದು ಜಾತ್ರೆ ಹಾಗೂ ಉತ್ಸವಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದು, ಉತ್ತಮ ಬೇಡಿಕೆಯೂ ವ್ಯಕ್ತವಾಗಿದೆ. ಸಾಂಪ್ರದಾಯಿಕ ಶೈಲಿಯ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ತಂಡ ಶ್ರಮಿಸುತ್ತಿದೆ.

ಕಲಾವಿದರಾದ ಪುರೋಷತ್ತಮ ಅಡ್ವೆ ಅವರ ಮಾರ್ಗದರ್ಶನದಲ್ಲಿ ಯುವಕರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಕೊರಗ ಯುವ ಸಂಘಟನೆಯ ಗಣೇಶ್‌ ವಿ.ಕೊರಗ ಕುಂಭಾಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.