
100 ಕ್ಕೂ ಹೆಚ್ಚು ಬೈಕ್ ಸವಾರರು ಭಾಗಿ ಆರೋಗ್ಯ ಜಾಗೃತಿಗಾಗಿ ಬೈಕ್ ರ್‍ಯಾಲಿ
ಉಡುಪಿ: ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಶಿಸ್ತು, ಸುರಕ್ಷಿತ ವಾಹನ ಚಾಲನೆ, ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಮಣಿಪಾಲ ಆಟೊ ಕ್ಲಬ್, ಉಡುಪಿ ಜಾವಾ–ಯೆಜ್ಡಿ ಮೋಟಾರ್ ಸೈಕಲ್ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಉಡುಪಿ, ಆಭರಣ ಮೋಟರ್ಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೈಕ್ ಸವಾರರು ಹಾಗೂ ಆರೋಗ್ಯ ವೃತ್ತಿಪರರ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಸಮಾಜಮುಖಿ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮಣಿಪಾಲ ಕ್ಲಸ್ಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಮಾತನಾಡಿ, ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ. ಜಾಗೃತಿ, ನಿಯಮಿತ ತಪಾಸಣೆ ಹಾಗೂ ಜೀವನಶೈಲಿ ಬದಲಾವಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಮಾಜಕ್ಕೆ ಆರೋಗ್ಯದ ಕುರಿತ ಸಂದೇಶವನ್ನು ತಲುಪಿಸುವ ಉದ್ದೇಶದಿಂದ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಂಬಾಕು ಸೇವನೆ, ದೀರ್ಘಕಾಲ ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ವಾಯುಮಾಲಿನ್ಯವೂ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಪಾಯಕಾರಕ ಅಂಶಗಳಾಗಿವೆ ಎಂದು ವಿವರಿಸಿದರು.
ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಜೋಸ್ ಮಾತನಾಡಿ, ಆರಂಭಿಕ ಪತ್ತೆಯ ಮೂಲಕ ಕ್ಯಾನ್ಸರ್‌ನ ಭಾರವನ್ನು ಕಡಿಮೆ ಮಾಡುವಲ್ಲಿ ಆರೋಗ್ಯ ಸಂಸ್ಥೆಗಳು, ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ವೈದ್ಯಕೀಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್ ಪೈ ಅವರು ವಿಶ್ವ ಕ್ಯಾನ್ಸರ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿ, ಜಾಗೃತಿ, ಆರಂಭಿಕ ಪತ್ತೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಇತ್ತೀಚಿನ ಪ್ರಗತಿಗಳ ಬಗ್ಗೆ ವಿವರಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹಾಗೂ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬೈಕ್ ರ‍್ಯಾಲಿಯು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಹೊರಟು ಉಡುಪಿ ಮುಖ್ಯ ರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರದವರೆಗೆ ತೆರಳಿ, ಅಲ್ಲಿಂದ ಕಸ್ತೂರ್ಬಾ ಆಸ್ಪತ್ರೆ ಮರಳಿ ಸಮಾಪನಗೊಂಡಿತು.
ಜಾಗೃತಿ ಕೊರತೆ ತಡವಾದ ರೋಗನಿರ್ಣಯ ಮೊದಲಾದವುಗಳು ಕ್ಯಾನ್ಸರ್ ರೋಗದ ಪರಿಣಾಮವನ್ನು ಇನ್ನಷ್ಟು ಗಂಭೀರವಾಗಿಸುತ್ತಿದೆಡಾ.ಸುಧಾಕರ್ ಕಂಟಿಪುಡಿ ಮಣಿಪಾಲ ಕ್ಲಸ್ಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.