
ಹೆಬ್ರಿ: ಇಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ರಚಿಸಿರುವ ಸಂವಿಧಾನ ಮೌಲ್ಯಗಳ ಜಾಗೃತಿ ಮೂಡಿಸುವ ವರ್ಣ ಚಿತ್ತಾರಗಳು ಕಣ್ಸೆಳೆಯುತ್ತಿವೆ.
ಉಡುಪಿ ಜಿಲ್ಲೆಯ 45 ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಮಹತ್ವ ತಿಳಿಸಲು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಈ ಪ್ರಯತ್ನ ಮಾಡಿದ್ದಾರೆ. ಹಾಸ್ಟೆಲ್‌ನ ಗೋಡೆ, ಆವರಣ ಗೋಡೆಗಳ ಮೇಲೆ ವಿದ್ಯಾರ್ಥಿಗಳು ವರ್ಣಚಿತ್ರಗಳನ್ನು ರಚಿಸಿದ್ದಾರೆ.
ಏಕತೆ, ವೈವಿಧ್ಯತೆ, ಭ್ರಾತೃತ್ವದ ಭಾವನೆ, ಸೌಹಾರ್ದ, ಸಹೋದರತ್ವ, ಬಾಂಧವ್ಯ, ಒಗ್ಗಟ್ಟು, ಸಂವಿಧಾನದ ಪೀಠಿಕೆ, ಸ್ವಾತಂತ್ರ್ಯ ಹೋರಾಟಗಾರರು, ಕರಾವಳಿ ಸಂಸ್ಕೃತಿ, ರಾಷ್ಟ್ರಪಕ್ಷಿ, ಕೃಷಿ ಜಾಗೃತಿ, ಪರಿಸರ ಜಾಗೃತಿ, ವೈಜ್ಞಾನಿಕತೆ, ಡಾ. ಬಿ.ಆರ್. ಅಂಬೇಡ್ಕರ್ ಕಲ್ಪನೆ, ಮಹಾತ್ಮ ಗಾಂಧಿ ಅವರ ಆದರ್ಶಗಳು ಸೇರಿದಂತೆ ಅನೇಕ ಸಂಗತಿಗಳು ವಿದ್ಯಾರ್ಥಿಗಳ ಕುಂಚದಲ್ಲಿ ಗೋಡೆಯ ಮೇಲೆ ಮೂಡಿವೆ. ನಿಲಯ ಮೇಲ್ವಿಚಾರಕಿ ಜಯಂತಿ ಎನ್ ಸಹಕಾರದಲ್ಲಿ ವಿದ್ಯಾರ್ಥಿಗಳಾದ ಧನ್ಯಶ್ರೀ ಎಚ್.ಆರ್, ನವ್ಯ, ಸಂಗೀತಾ ಡಿ.ಎಂ, ಪ್ರತೀಕ್ಷಾ, ವರ್ಷಿಣಿ, ಸೃಷ್ಟಿ, ನೇತ್ರಾ, ಗಾಯತ್ರಿ ಸೇರಿ ಗೋಡೆಗೆ ಜೀವಕಳೆ ತುಂಬಿದ್ದಾರೆ.
ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ನಿಲಯದಲ್ಲಿ ಇರುವುದರಿಂದ ಅವರ ಪ್ರತಿಭೆ ಗುರುತಿಸುವ ಜೊತೆಗೆ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕೆಂದು ಈ ಕಾರ್ಯ ನಡೆಸಲಾಗಿದೆ. ಚಿತ್ರಕಲೆಗೆ ಬೇಕಾದ ವ್ಯವಸ್ಥೆಯನ್ನು ನಿಲಯದಲ್ಲಿ ಮಾಡಲಾಗಿದೆ. ವಿದ್ಯಾರ್ಥಿಗಳೇ ವರ್ಣ ಚಿತ್ರ ಬಿಡಿಸುವುದರಿಂದ ವೆಚ್ಚ ಕಡಿಮೆಯಾಗುತ್ತದೆ ಎನ್ನುತ್ತಾರೆ ಹಾಸ್ಟೆಲ್ ಪ್ರಮುಖರು.
ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆಯಂತೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ವರ್ಣ ಚಿತ್ರ ರಚನೆ ಮಾಡಲು, ಪೂರಕವಾದ ವ್ಯವಸ್ಥೆ ಕಲ್ಪಿಸಿದ್ದೇವೆ. ನಿಲಯದ ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿಸಿಕೊಂಡು ಗೋಡೆಗಳಿಗೆ ಕಳೆ ತುಂಬಿದ್ದಾರೆ ಎನ್ನುತ್ತಾರೆ ಹೆಬ್ರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಜಯಂತಿ ಎನ್.
ಪ್ರಜಾಪ್ರಭುತ್ವದ ಮೌಲ್ಯ ತಿಳಿಸುವ ಪ್ರಯತ್ನ
ವಿದ್ಯಾರ್ಥಿಗಳಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿಗಳ ಕೈಯಿಂದಲೇ ಚಿತ್ರ ಬಿಡಿಸಲು ಪ್ರೋತ್ಸಾಹ ನೀಡಿದ್ದೇನೆ. ನಮ್ಮ ಸಂಸ್ಕೃತಿ ಆಚಾರ– ವಿಚಾರ ಯೋಧರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾತ್ಮರು ಕುಂಚದಲ್ಲಿ ಮೂಡಿವೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್.
‘ಅವಕಾಶಕ್ಕಾಗಿ ಧನ್ಯವಾದ’
ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಪ್ರಜಾಪ್ರಭುತ್ವ ರಾಷ್ಟ್ರ ನಾಯಕರ ಬಗ್ಗೆ ಚಿತ್ರ ಬಿಡಿಸಲು ಹೇಳಿದಾಗ ಅತ್ಯಂತ ಖುಷಿಯಿಂದ ಒಪ್ಪಿಕೊಂಡಿದ್ದೇವೆ. ನಮ್ಮಂತಹ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಇಂತಹ ಜಾಗೃತಿ ಮೂಡಿಸಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ. ಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟವರಿಗೆ ಧನ್ಯವಾದಗಳು ಎನ್ನುತ್ತಾಳೆ ವಿದ್ಯಾರ್ಥಿನಿ ಧನ್ಯಶ್ರೀ ಎಚ್.ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.