ಉಡುಪಿ: ಮಕ್ಕಳ ವಿಜಯದ ಹಿಂದೆ ಪೋಷಕರ ಬಲಿದಾನ, ದೇಶದ ರಕ್ಷಣೆಯ ಹಿಂದೆ ಸೈನಿಕರ ಬಲಿದಾನ ಇರುವಂತೆ, ಪ್ರತಿಯೊಂದು ವಿಜಯದ ಹಿಂದೆಯೂ ಬಲಿದಾನ ಇರುತ್ತದೆ. ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ ಸೈನಿಕರನ್ನು ಕಾರ್ಗಿಲ್ ವಿಜಯ ದಿವಸದಂದು ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಸೈನಿಕರ ವೇದಿಕೆ ಅಧ್ಯಕ್ಷ ಗಿಲ್ಬರ್ಟ್ ಬ್ರಿಗಾಂಜಾ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಚಲನ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, 1999ರಲ್ಲಿ ಪಾಕಿಸ್ತಾನವು ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಮುಂದಾಗಿತ್ತು. ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಲು 90 ದಿನಗಳ ಕಾಲ ಭಾರತೀಯ ಸೇನೆ ಆಪರೇಷನ್ ವಿಜಯ್ ಕಾರ್ಯಾಚರಣೆ ನಡೆಸಿ ಯಶಸ್ವಿಯಾಯಿತು. ಭಾರತದ ಭೂಭಾಗವನ್ನು ವಶಪಡಿಸಿಕೊಂಡ ವಿಜಯದ ನೆನಪಿಗೆ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯದಿವಸ ಆಚರಿಸಲಾಗುತ್ತಿದೆ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಪೋಷಕರು ಪ್ರೀತಿಯಿಂದ ಬೆಳೆಸಿದ ಮಕ್ಕಳನ್ನು ಕಳೆದುಕೊಂಡಿದ್ದಾರೆ. ತಂಗಿ ಅಣ್ಣನನ್ನು ಕಳೆದುಕೊಂಡಿದ್ದಾಳೆ. ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ಯುದ್ಧದಲ್ಲಿ 527 ಜನ ಪ್ರಾಣ ತೆತ್ತಿದ್ದಾರೆ. 1,350 ಸೈನಿಕರು ಅಂಗಹೀನರಾಗಿದ್ದಾರೆ. ದೇಶಕ್ಕಾಗಿ ಇಷ್ಟೆಲ್ಲ ತ್ಯಾಗ ಮಾಡಿರುವ ಹುತಾತ್ಮರನ್ನು ಕಾರ್ಗಿಲ್ ವಿಜಯ ದಿನದಲ್ಲಾದರೂ ಸ್ಮರಿಸದಿದ್ದರೆ ನಾವು ಭಾರತೀಯರಾಗಿರಲು ಯೋಗ್ಯರಲ್ಲ ಎಂದರು.
ಕರಾವಳಿ ಭಾಗದಲ್ಲಿ ಸೈನಿಕರಿಗೆ ಹೆಚ್ಚು ಗೌರವ ನೀಡಲಾಗುತ್ತದೆ. ಆದರೆ, ಸೇನೆಗೆ ಸೇರಲು ಯುವಕರು ಹೆಚ್ಚು ಉತ್ಸುಕತೆ ತೋರದಿರುವುದು ಬೇಸರದ ಸಂಗತಿ. ಸೇನೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿದ್ದು, ದೇಶಸೇವೆ ಮಾಡಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮೀಸಲಾತಿ ಇಲ್ಲದೆ ಉದ್ಯೋಗಾವಕಾಶಗಳು ದೊರೆಯುವುದು ಸೇನೆಯಲ್ಲಿ ಮಾತ್ರ. ಅರ್ಹತೆ, ದೈಹಿಕ ಸಾಮರ್ಥ್ಯ ಆಯ್ಕೆಯ ಮಾನದಂಡವಾಗಿದ್ದು, ಯುವಕರು ಸೇನೆಯತ್ತ ಉತ್ಸುಕತೆ ತೋರಬೇಕು. ಸಿನಿಮಾ ತಾರೆಯರು, ಕ್ರೀಡಾಪಟುಗಳ ಬದಲಿಗೆ ಸ್ವಾತಂತ್ರ್ಯ ಹೋರಾಡಿದ ಚೇತನಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ1,200 ನಿವೃತ್ತ ಸೈನಿಕರು ಇದ್ದಾರೆ. 600 ರಿಂದ 700 ಜನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತ ಸೈನಿಕರು ಸಮಾಜದಿಂದ ಗೌರವ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ ಎಂದರು.
ಸಂಚಲನ ಸಂಸ್ಥೆಯ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ‘1999ರ ಕಾರ್ಗಿಲ್ ವಿಜಯವನ್ನು ಸ್ಮರಿಸಬೇಕಾಗಿರುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ಯುದ್ಧದಲ್ಲಿ 527 ಸೈನಿಕರು ಬಲಿದಾನ ಮಾಡಿದ್ದು ಅವರ ಸ್ಮರಣಾರ್ಥ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 527 ಗಿಡಗಳನ್ನು ನೆಡುವ ಮೂಲಕ ಸಂಚಲನ ಸಂಸ್ಥೆ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯ್ತಿ ಸಿಇಒ ಶಿವಾನಂದ ಕಾಪಶಿ,ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ಯುವ ಸಬಲೀಕರ ಹಾಗೂ ಕ್ರೀಡಾ ಇಲಾಖೆ ಸಹಾಯ ನಿರ್ದೇಶಕ ರೋಷನ್ ಶೆಟ್ಟಿ, ಮಲಬಾರ್ ಚಿನ್ನಾಭರಣ ಮಳಿಗೆಯ ಮ್ಯಾನೇಜರ್ ಹಫೀಸ್ ಅವರೂ ಇದ್ದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.