ADVERTISEMENT

ಉಡುಪಿ | ಮಾರ್ಗಸೂಚಿಯಂತೆ ಕೋವಿಡ್‌ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ

230 ಮಂದಿಯ ಮಾದರಿ ಪ್ರಯೋಗಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2020, 14:31 IST
Last Updated 17 ಮೇ 2020, 14:31 IST

ಉಡುಪಿ: ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದ ಕುಂದಾಪುರದ 54 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ಕೋವಿಡ್‌ ಮಾರ್ಗಸೂಚಿಯನ್ವಯ ಭಾನುವಾರ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನೆರವೇರಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಮೃತರ ಕುಟುಂಬದ ಸದಸ್ಯರು ಶವ ಪಡೆಯಲು ನಿರಾಕರಿಸಿದ ಕಾರಣ ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗಿಯಾದವರು ಪಿಪಿಇ ಕಿಟ್‌ಗಳನ್ನು ಧರಿಸಿದ್ದರು. ಸರ್ಕಾರದ ಮಾರ್ಗಸೂಚಿಯಂತೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.

230 ಮಾದರಿ ರವಾನೆ:ಭಾನುವಾರ 230 ಮಂದಿಯ ಕಫದ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಕುಂದಾಪುರದ ಸೋಕಿಂತ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹೆಚ್ಚಿನವರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 341 ವರದಿಗಳ ಫಲಿತಾಂಶ ಬರಬೇಕಿದೆ.

ADVERTISEMENT

ಮತ್ತೊಂದೆಡೆ ಭಾನುವಾರ 16 ಮಂದಿಯಲ್ಲಿ ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿದ್ದು ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿ ನೆಗೆಟಿವ್‌:ಮತ್ತೊಂದೆಡೆ, ಶನಿವಾರ ಹೃದ್ರೋಗದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಬನ್ನಂಜೆಯ 44 ವರ್ಷದ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.

ವ್ಯಕ್ತಿ ಜಿಲ್ಲಾ ಆಸ್ಪತ್ರೆಗೆ ದಾಖಲಾದಾಗ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ಕಂಡುಬಂದಿಲ್ಲ. ಮಯೊಕಾರ್ಡಿಯಲ್‌ ಇನ್‌ಫ್ರಾಕ್ಷನ್‌ನಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಭಾನುವಾರ ಪ್ರಕರಣ ಇಲ್ಲ:ಜಿಲ್ಲೆಯಲ್ಲಿ ಭಾನುವಾರ ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿಲ್ಲ. 21 ಮಂದಿಯ ವೈದ್ಯಕೀಯ ವರದಿ ಬಂದಿದ್ದು ನೆಗೆಟಿವ್ ಇದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10ಕ್ಕೇರಿಕೆಯಾಗಿದ್ದು, ಒಬ್ಬರು ಮೃತ, ಮೂವರು ಗುಣಮುಖ ಹಾಗೂ 6 ಸಕ್ರಿಯಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.