ADVERTISEMENT

ಉಡುಪಿ ಜಿಲ್ಲೆಯಲ್ಲಿ ಜ.8ರಂದು ಕೋವಿಡ್‌–19 ಲಸಿಕೆ ತಾಲೀಮು

ಜಿಲ್ಲೆಯ 8 ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆ: ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಮೊದಲು ಲಸಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 15:35 IST
Last Updated 7 ಜನವರಿ 2021, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಶೀಘ್ರವೇ ದೇಶದಾದ್ಯಂತ ಕೋವಿಡ್‌–19 ಲಸಿಕಾ ಆಂದೋಲನ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಜಿಲ್ಲಾಡಳಿತ ಮಾಡಿಕೊಂಡಿರುವ ಸಿದ್ಧತೆಗಳ ಪರೀಕ್ಷೆಯ ಕುರಿತು ಶುಕ್ರವಾರ ಪ್ರಾತ್ಯಕ್ಷಿಕೆ (ಡ್ರೈರನ್‌) ನಡೆಯಲಿದೆ.

ಜಿಲ್ಲೆಯಲ್ಲಿ ಎಂಟು ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯ ಡ್ರೈರನ್ ನಡೆಯುತ್ತಿದ್ದು, ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸ್ಮಾರಕ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ನಗರದ ಡಾ. ಟಿ.ಎಂ.ಎ. ಪೈ ಆಸ್ಪತ್ರೆ, ಆದರ್ಶ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಕಾರ್ಕಳ ತಾಲ್ಲೂಕು ಆಸ್ಪತ್ರೆ, ಕುಂದಾಪುರದ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಬ್ರಿ ಹಾಗೂ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಪ್ರಾತ್ಯಕ್ಷಿಕೆ ನಡೆಯಲಿದೆ.

ಲಸಿಕೆ ವಿತರಣೆ ಹೇಗೆ ?
ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿರುವ ಸಂಗ್ರಹಾಗಾರದಿಂದ ಕೋವಿಡ್ ಲಸಿಕೆಯನ್ನು ಸಂಗ್ರಹಿಸಲು ಅಗತ್ಯ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲಿಂದ ಲಸಿಕೆಗಳನ್ನು ಜಿಲ್ಲೆಯಾದ್ಯಂತ ಗುರುತಿಸಲಾಗಿರುವ ಕೋವಿಡ್ ಚೈನ್ ಪಾಯಿಂಟ್ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತದೆ. ಬಳಿಕ ಲಸಿಕಾ ವಿತರಣಾ ಕೇಂದ್ರಗಳಿಗೆ ವ್ಯಾಕ್ಸಿನ್ ಸಾಗಣೆಯ ಸಾಧನದಲ್ಲಿ ತಲುಪಿಸಲಾಗುತ್ತದೆ.

ADVERTISEMENT

ಲಸಿಕೆ ವಿತರಣಾ ಕೇಂದ್ರದಲ್ಲಿ ಐವರು ಕಾರ್ಯ ನಿರ್ವಹಿಸಲಿದ್ದು, ನಿರೀಕ್ಷಣಾ ಕೊಠಡಿಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆದರೆ, ಲಸಿಕಾ ಕೊಠಡಿ ಲಸಿಕೆ ಹಾಕಲಾಗುತ್ತದೆ. ಲಸಿಕೆ ಹಾಕಿದ ಬಳಿಕ ಲಸಿಕೆ ತೆಗೆದುಕೊಂಡವರನ್ನು ನಿಗಾ ಕೊಠಡಿಯಲ್ಲಿ ಅರ್ಧತಾಸು ಇರಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್-19 ಲಸಿಕೆಯನ್ನು ಮೊದಲ ಹಂತದಲ್ಲಿ ಕೋವಿಡ್‌ ವಾರಿಯರ್ಸ್‌ಗಳಾದ ಆರೋಗ್ಯ ಕಾರ್ಯಕರ್ತರಿಗೆ ನೀಡಲು ಸರ್ಕಾರ ನಿರ್ಧರಿಸಿದ್ದು, ಇದುವರೆಗೂ ಜಿಲ್ಲೆಯಲ್ಲಿ 19,500ಕ್ಕೂ ಹೆಚ್ಚು ಮಂದಿ ಕೋವಿನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಸಿಕೊಂಡವರಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ‘ಡಿ’ಗ್ರೂಪ್ ನೌಕರರು ಇದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ 2 ಬಾರಿ ಲಸಿಕೆ ನೀಡಲಾಗುತ್ತಿದ್ದು, 44,000 ಡೋಸ್‌ಗಳ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

‘ಅಭ್ಯಾಸ ಪಂದ್ಯದ ಮಾದರಿ’
ಕೋವಿಡ್‌ ಲಸಿಕೆ ವಿತರಣೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಡಿಕೊಂಡಿರುವ ತಯಾರಿ ಪರಿಶೀಲನೆಗೆ ರಾಜ್ಯದಾದ್ಯಂತ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಈ ಪ್ರಾತ್ಯಕ್ಷಿಕೆಯಲ್ಲಿ ಚುಚ್ಚುಮದ್ದು ನೀಡುವುದನ್ನು ಹೊರತುಪಡಿಸಿ ಲಸಿಕೆ ನೀಡುವಾಗ ಅನುಸರಿಸಬೇಕಾದ ಎಲ್ಲ ವಿಧಾನಗಳನ್ನು ಪಾಲಿಸಲಾಗುತ್ತದೆ. ಪ್ರಾತ್ಯಕ್ಷಿಕೆ ಸಂದರ್ಭ ಲೋಪ–ದೋಷಗಳು ಕಂಡುಬಂದರೆ ಮುಂದೆ ಸರಿಪಡಿಸಿಕೊಳ್ಳಲು ಆರೋಗ್ಯ ಇಲಾಖೆಗೆ ನೆರವಾಗಲಿದೆ.

ಲಸಿಕೆಗೆ ಆ್ಯಪ್‌ನಲ್ಲಿ ನೋಂದಣಿ: ಕೋವಿಡ್ ಲಸಿಕೆ ಪಡೆಯಲು ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಹಾಕಲು ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.