ADVERTISEMENT

ಉಡುಪಿ | ನಿರಂತರ ಮಳೆಗೆ ತತ್ತರಿಸಿದ ತೋಟಗಾರಿಕಾ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:48 IST
Last Updated 1 ಸೆಪ್ಟೆಂಬರ್ 2025, 4:48 IST
ಡ್ರ್ಯಾಗನ್‌ ಫ್ರೂಟ್‌ ಗಿಡಕ್ಕೆ ತುಕ್ಕು ಶಿಲೀಂಧ್ರ ರೋಗ ಬಾಧಿಸಿರುವುದು
ಡ್ರ್ಯಾಗನ್‌ ಫ್ರೂಟ್‌ ಗಿಡಕ್ಕೆ ತುಕ್ಕು ಶಿಲೀಂಧ್ರ ರೋಗ ಬಾಧಿಸಿರುವುದು   

ಉಡುಪಿ: ಅವಧಿಪೂರ್ವವಾಗಿ ಹಾಗೂ ಅನಂತರ ಸುರಿದ ಅತಿಯಾದ ಮಳೆಯಿಂದಾಗಿ ಈ ಬಾರಿ ಜಿಲ್ಲೆಯಾದ್ಯಂತ ತೋಟಗಾರಿಕಾ ಬೆಳೆಗಳಿಗೆ ಹಾನಿ ಸ‌ಂಭವಿಸಿ ರೈತರಿಗೆ ಸಂಕಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಪ್ರತಿವರ್ಷ ನೆರೆ ಹಾವಳಿಯಿಂದ ಭತ್ತದ ಕೃಷಿಗೆ ಹಾನಿಯಾಗುವುದು ಸಾಮಾನ್ಯವಾಗಿದ್ದರೂ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ. ಆದರೆ, ಈ ಬಾರಿ ವಿಪರೀತ ಹಾನಿ ಸಂಭವಿಸಿದೆ ಎನ್ನುತ್ತಾರೆ ರೈತರು.

ಅಡಿಕೆ, ತೆಂಗು, ಕಾಳು ಮೆಣಸು, ಡ್ರ್ಯಾಗನ್‌ ಫ್ರೂಟ್‌, ಅನಾನಸ್‌ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ವಿಪರೀತ ಮಳೆ ಸುರಿದ ಪರಿಣಾಮವಾಗಿ ಅವರು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ADVERTISEMENT

ಮೇ ತಿಂಗಳ ಎರಡನೇ ವಾರದಿಂದ ಆರಂಭವಾದ ಮಳೆ ನಿರಂತರ ಮುಂದುವರಿದಿರುವುದು ಹಲವು ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ರೈತರು ಹೇಳುತ್ತಾರೆ.

ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರಧಾನವಾದರೂ ತೋಟಗಾರಿಕಾ ಬೆಳೆಯಾದ ಅಡಿಕೆ ಬೆಳೆಯನ್ನೇ ನಂಬಿರುವ ಹಲವು ರೈತರಿದ್ದಾರೆ. ಈ ಬಾರಿ ಅಡಿಕೆ ತೋಟಗಳಿಗೆ ಆವರಿಸಿದ್ದ ಕೊಳೆ ರೋಗವು ಈ ರೈತರನ್ನು ಹೈರಾಣಾಗಿಸಿದೆ. 

ಈ ಬಾರಿ ಮೇ ತಿಂಗಳಲ್ಲೇ ಅಬ್ಬರಿಸಿದ್ದ ಮಳೆಯು ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಸುರಿದಿತ್ತು. ಮೇ 1ರಿಂದ 29ರ ನಡುವಿನ ಅವಧಿಯಲ್ಲೇ 70.5 ಸೆಂ.ಮೀ. ಮಳೆ ಸುರಿದಿತ್ತು. ಇದು ತೋಟಗಾರಿಕಾ ಬೆಳೆಗಳಿಗೂ ಸಮಸ್ಯೆ ತಂದೊಡ್ಡಿತ್ತು.

ಇದರಿಂದ ಕೃಷಿ ಚಟುವಟಿಕೆಗಳ ಪೂರ್ವ ತಯಾರಿ ನಡೆಸಲು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಕೃಷಿಕರು ಸೇರಿದಂತೆ ಬಹುತೇಕ ರೈತರಿಗೆ ಸಾಧ್ಯವಾಗಿರಲಿಲ್ಲ.

‘ಅತಿಯಾದ ಮಳೆ ತಂದ ಅಪತ್ತು’

ನಿರಂತರವಾದ ಮಳೆಯ ಪರಿಣಾಮವಾಗಿ ಈ ಬಾರಿ ಜಿಲ್ಲೆಯಲ್ಲಿ ಹಲವು ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗಾರರ ಪಾಡು ಹೇಳ ತೀರದಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ತಿಳಿಸಿದರು. ಹೆಬ್ರಿ ಮೊದಲಾದೆಡೆ ಭಾರಿ ಗಾಳಿಗೆ ಅಡಿಕೆ ಮರಗಳು ಮಗುಚಿ ರೈತರಿಗೆ ನಷ್ಟ ಉಂಟಾಗಿದೆ. ಕಾಳು ಮೆಣಸಿಗೂ ಸೊರಗು ರೋಗ ಕಾಣಿಸಿಕೊಂಡು ಇಳುವರಿ ಕುಸಿತವಾಗಿದೆ. ಈ ಬಾರಿ ಆರಂಭದಲ್ಲಿ ಅನಿರೀಕ್ಷಿತವಾಗಿ ಮಳೆ ಸುರಿದ ಕಾರಣ ರೈತರಿಗೆ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು.

ಕೊಳೆತು ಹೋದ ಅನಾನಸ್‌

ಜಿಲ್ಲೆಯಲ್ಲಿ ಅನಾನಸ್‌ ಕೃಷಿಯನ್ನೇ ನಂಬಿರುವ ಹಲವು ರೈತರಿದ್ದಾರೆ. ಅದರಲ್ಲೂ ಕುಂದಾಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾರಿ ಮೇ ತಿಂಗಳಲ್ಲಿ ಸುರಿದ ಅವಧಿಪೂರ್ವ ಮಳೆಯು ಅನಾನಸ್‌ ಬೆಳೆಗಾರರಿಗೆ ಸಾಕಷ್ಟು ನಷ್ಟ ಉಂಟು ಮಾಡಿತ್ತು. ಅನಾನಸ್‌ ಎಲೆಗಳ ನಡುವೆ ನೀರು ನಿಂತು ಹಣ್ಣುಗಳು ಕೊಳೆತು ಹೋಗಿ ಬೆಳೆ ನಾಶವಾಗಿತ್ತು. ಮೇ ತಿಂಗಳಲ್ಲಿ ಅನಾನಸಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಸಂದರ್ಭದಲ್ಲೇ ಮಳೆ ಸುರಿದು ಬೆಳೆ ನಷ್ಟವಾಗಿದೆ ಎಂದು ಅನಾನಸ್‌ ಬೆಳೆಗಾರರು ತಿಳಿಸಿದ್ದಾರೆ.‌‌‌‌

ತೆಂಗಿಗೂ ಕೆಂಪು ಮೂತಿ ಹುಳು ಕಾಟ

ಅತಿಯಾದ ಮಳೆಯಿಂದಾಗಿ ತೆಂಗಿನ ಕೃಷಿಗೂ ಈ ಬಾರಿ ಕೊಳೆ ರೋಗ ತಗುಲಿದೆ. ಜೊತೆಗೆ ಕೆಂಪು ಮೂತಿ ಹುಳದ ಹಾವಳಿಯಿಂದಲೂ ರೈತರು ಬಸವಳಿದಿದ್ದಾರೆ. ಕೆಂಪುಮೂತಿ ಹುಳು ಸಣ್ಣ ತೆಂಗಿನ ಮರಗಳ ಕಾಂಡ ಕೊರೆದರೆ ದೊಡ್ಡ ಮರಗಳ ತುದಿಯ ಸುಳಿಯನ್ನು ಕೊರೆಯುತ್ತದೆ. ಇದರಿಂದ ಸುಳಿ ತುಂಡಾಗಿ ಬೀಳುತ್ತದೆ ಎಂದು ರೈತರು ತಿಳಿಸಿದ್ದಾರೆ. ಕೊಳೆ ರೋಗಕ್ಕೆ ಬೋರ್ಡೊ ದ್ರಾವಣ ಪರಿಣಾಮಕಾರಿಯಾಗಿದ್ದರೂ ತೆಂಗಿನ ಮರಗಳು ಹೆಚ್ಚು ಎತ್ತರಕ್ಕೆ ಬೆಳೆಯುವುದರಿಂದ ಅವುಗಳಿಗೆ ಸಿಂಪಡಿಸುವುದು ಸಾಧ್ಯವಾಗದ ಕೆಲಸ ಎಂದು ಹೇಳುತ್ತಾರೆ.

ಡ್ರ್ಯಾಗನ್ ಫ್ರೂಟ್ ಬೆಳೆದವರೂ ಕಂಗಾಲು

ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಜಿಲ್ಲೆಯ ಕೆಲವು ರೈತರು ಪ್ರಾಯೋಗಿಕವಾಗಿ ಹಲವು ಸವಾಲುಗಳ ನಡುವೆ ಬೆಳೆದಿದ್ದರು. ಆರಂಭದಲ್ಲಿ ಉತ್ತಮ ಇಳುವರಿಯನ್ನೂ ಪಡೆದಿದ್ದರು. ಆದರೆ ಕೆಲವೆಡೆ ತುಕ್ಕು ಶಿಲೀಂಧ್ರ ರೋಗದಿಂದ ಬೆಳೆ ನಷ್ಟವಾಗಿದೆ. ಅತಿಯಾದ ಮಳೆಯಿಂದಾಗಿ ರೋಗ ಇನ್ನಷ್ಟು ಉಲ್ಬಣವಾಗಿದೆ.  ತುಕ್ಕು ಶಿಲೀಂಧ್ರ ರೋಗಕ್ಕೆ ಯಾವ ಔಷಧಿ ಸಿಂಪಡಿಸಬೇಕೆಂಬ ಮಾಹಿತಿ ಕೊರತೆಯೂ ಬೆಳೆಗಾರರಲ್ಲಿದೆ. ಡ್ರ್ಯಾಗನ್‌ ಫ್ರೂಟ್‌ ಬೆಳೆ ಇಲ್ಲಿನ ಹವಾಗುಣಕ್ಕೆ ಪೂರಕವಾದ ಬೆಳೆಯಲ್ಲ ಎಂಬ ಕಾರಣಕ್ಕೆ ಸಂಬಂಧಿತ ಇಲಾಖೆಯಿಂದಲೂ ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಸಿಗುತ್ತಿಲ್ಲ ಎನ್ನುತ್ತಾರೆ ರೈತರು. ಶಿಲೀಂಧ್ರ ದಾಳಿಯಿಂದ ಡ್ರ್ಯಾಗನ್‌ ಫ್ರೂಟ್‌ ಗಿಡದ ಕಾಂಡ ಕೊಳೆತು ಹೋಗುತ್ತಿದೆ. ಇದು ಇಳುವರಿ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳುತ್ತಾರೆ.

ಉದುರಿಬಿದ್ದ ಅಡಿಕೆ

ಅತಿಯಾದ ಮಳೆಯಿಂದಾಗಿ ಕೊಳೆ ರೋಗ ಕಾಣಿಸಿಕೊಂಡು ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಭಾರಿ ನಷ್ಟ ಉಂಟಾಗಿದೆ. ಎಳೆ ಅಡಿಕೆ ಕೊಳೆತು ಉದುರಿ ಬೀಳುತ್ತಿದೆ. ಆರಂಭದಲ್ಲಿ ಮಳೆ ಬಿಡುವು ನೀಡದ ಕಾರಣ ಬೋರ್ಡೊ ದ್ರಾವಣ ಸಿಂಪಡಿಸಲು ಸಾಧ್ಯವಾಗದೆ ಇರುವುದು ಕೊಳೆ ರೋಗ ಹೆಚ್ಚಾಗಲು ಕಾರಣವಾಗಿದೆ ಎಂದು ರೈತರು ತಿಳಿಸಿದ್ದಾರೆ. ಅಡಿಕೆ ಮರ ಹತ್ತುವ ಕಾರ್ಮಿಕರ ಕೊರತೆಯಿಂದಲೂ ಕೆಲವೆಡೆ ಬೋರ್ಡೊ ದ್ರಾವಣ ಸಿಂಪಡಿಸುವಲ್ಲಿ ವ್ಯತ್ಯಯವಾಗಿತ್ತು.

ಡ್ರ್ಯಾಗನ್‌ ಫ್ರೂಟ್‌ ಬೆಳೆಗೆ ಮೊದಲೇ ಶಿಲೀಂಧ್ರ ರೋಗವಿತ್ತು. ಮಳೆಯೂ ಜಾಸ್ತಿಯಾದ ಕಾರಣ ಉಲ್ಬಣವಾಗಿದೆ. ಪರಿಹಾರ ಮಾರ್ಗ ಕಾಣದಾಗಿದೆ.
ವಾಸು ಜಡ್ಕಲ್‌, ಡ್ರ್ಯಾಗನ್‌ ಬೆಳೆಗಾರ
ಈ ಬಾರಿ ಮಳೆಯಿಂದಾಗಿ ಅನಾನಸ್‌ ಕೊಳೆತು ಹೋಗಿ ₹13 ಲಕ್ಷದಷ್ಟು ನಷ್ಟ ಉಂಟಾಗಿದೆ. ಇಳುವರಿಯೂ ಕುಸಿತವಾಗಿದೆ.
ಫೆಡ್ರಿಕ್‌, ಅನಾನಸ್‌ ಬೆಳೆಗಾರ
ಅತಿಯಾದ ಮಳೆಯ ಕಾರಣಕ್ಕೆ ಕೊಳೆ ರೋಗದಿಂದ ಕೆಲವು ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿದೆ. ರೋಗ ನಿಯಂತ್ರಣದ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ
ಹೇಮಂತ್‌ ಕುಮಾರ್‌, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ
ಮಳೆ ಬೇಗ ಆರಂಭವಾದ ಕಾರಣ ಜೂನ್ ತಿಂಗಳಲ್ಲೇ ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಿದ್ದೇವೆ. ಆದರೂ ಕೊಳೆರೋಗ ನಿಯಂತ್ರಣಕ್ಕೆ ಬರದೆ ಎಳೆ ಅಡಿಕೆ ಉದುರಿ ಬಿದ್ದಿದೆ.
ಶೈಲೇಶ್‌ ಮರಾಠೆ, ಕೃಷಿಕ, ಕಾರ್ಕಳ
ಕೊಳೆರೋಗ ಬಾಧಿಸಿರುವ ತೆಂಗು
ಉದುರಿ ಬಿದ್ದಿರುವ ಎಳೆ ಅಡಿಕೆ
ಅನಾನಸ್‌ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.