ADVERTISEMENT

ಉಡುಪಿ: ಸೆ.28ರಿಂದ ಕೃಷ್ಣಮಠದಲ್ಲಿ ದೇವರ ದರ್ಶನ

ಮಧ್ಯಾಹ್ನ 2ರಿಂದ 5ರವರೆಗೆ ಅವಕಾಶ; ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:50 IST
Last Updated 19 ಸೆಪ್ಟೆಂಬರ್ 2020, 12:50 IST
ಕೃಷ್ಣಮಠ
ಕೃಷ್ಣಮಠ   

ಉಡುಪಿ: ಕೆಲವು ನಿಬಂಧನೆಗಳೊಂದಿಗೆ ಕೃಷ್ಣಮಠದಲ್ಲಿ ಸೆ.28ರಿಂದ ದೇವರ ದರ್ಶನಕ್ಕೆ ಅವಕಾಶ ನೀಡಲು ಪರ್ಯಾಯ ಅದಮಾರು ಮಠದ ಯತಿಗಳು ನಿರ್ಧರಿಸಿದ್ದಾರೆ ಎಂದು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದರು.

ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರ ಬಳಿಕ ಕೇಂದ್ರ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಿದೆ. ಅದರಂತೆ, ಕೃಷ್ಣಮಠದಲ್ಲಿ ಸೆ.28 ರಿಂದ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.

ಕೋವಿಡ್ ಸೋಂಕು ವ್ಯಾಪಕವಾದ ಬಳಿಕ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾರ್ಚ್ 22ರಿಂದ ಕೃಷ್ಣಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. 6 ತಿಂಗಳ ಬಳಿಕ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದರು.

ADVERTISEMENT

ನಿಬಂಧನೆಗಳು

ಭಕ್ತರು ರಾಜಾಂಗಣದ ಬಳಿಯ ಉತ್ತರ ದ್ವಾರದ ಮೂಲಕ ಕೃಷ್ಣಮಠಕ್ಕೆ ಬರಬೇಕು.ಉತ್ತರ ದ್ವಾರದಿಂದ ಬಂದು, ಭೋಜನ ಶಾಲೆಯ ಮೇಲಿನಿಂದ ಸಾಗಿ, ಗರುಡ ದೇವರ ಬಳಿ ಕೆಳಗಿಳಿದು ಕೃಷ್ಣನ ದರ್ಶನ ಪಡೆಯಬೇಕು. ಬಳಿಕ ಮುಖ್ಯಪ್ರಾಣ ದೇವರ ಬಳಿಯ ಮೆಟ್ಟಿಲುಗಳ ಮೂಲಕ ನಿರ್ಗಮಿಸಬೇಕು.

ರಥಬೀದಿಯಿಂದ ಮಧ್ವ ಸರೋವರದ ಮೇಲಿರುವ ದಾರಿಯ ಮೂಲಕ ಸೇವಾ ಕಚೇರಿ ಮಾರ್ಗವಾಗಿ ಕೃಷ್ಣಮಠ ಪ್ರವೇಶಿಸಲು ಮಠದಿಂದ ಕಡ್ಡಾಯವಾಗಿ ಪ್ರವೇಶ ಪತ್ರ ಪಡೆಯಬೇಕು. ಮಠದಲ್ಲಿ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕೌಂಟರಿನಲ್ಲಿ ಪ್ರಸಾದ ಸ್ವೀಕರಿಸಬಹುದು ಎಂದರು.

ಮಠದೊಳಗೆ ಮಂತ್ರ, ಪಾರಾಯಣ ಮಾಡುವಂತಿಲ್ಲ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಭದ್ರತಾ ಸಿಬ್ಬಂದಿ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ. ದರ್ಶನಕ್ಕೆ ಅವಕಾಶವಿದ್ದರೂ ಹಿರಿಯ ನಾಗರಿಕರು ಹಾಗೂ ಮಕ್ಕಳು ಮನೆಯಲ್ಲಿಯೇ ದೇವರನ್ನು ಪ್ರಾರ್ಥಿಸುವುದು ಒಳಿತು ಎಂದರು.

ಭೋಜನ ಹಾಗೂ ತೀರ್ಥ ಪ್ರಸಾದ ವ್ಯವಸ್ಥೆ ಸದ್ಯಕ್ಕೆ ಇಲ್ಲ. ಮಠದೊಳಗೆ ಎಳ್ಳೆಣ್ಣೆ, ತುಪ್ಪದ ದೀಪ ಹಚ್ಚುವ ಬದಲು ಕೌಂಟರಿನಲ್ಲಿ ಸಿಗುವ ಎಳ್ಳನ್ನು ಖರೀದಿಸಿ ಮಠಕ್ಕೆ ಒಪ್ಪಿಸಬೇಕು.ಭಕ್ತರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗೋವಿಂದರಾಜ್‌ ಹೆಗ್ಡೆ ಮನವಿ ಮಾಡಿದರು.

ಶ್ರೀಕೃಷ್ಣಾ ಸೇವಾ ಬಳಗದ ಯಶ್‌ಪಾಲ್‌ ಸುವರ್ಣ, ಕೊಠಾರಿಗಳಾದ ಶ್ರೀರಮಣ ಆಚಾರ್ಯ, ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್, ಪ್ರಧಾನ ಸಂಚಾಲಕ ವೈ.ಎನ್. ರಾಮಚಂದ್ರ ರಾವ್, ಗಣೇಶ್ ಹೆಬ್ಬಾರ್, ದಿನೇಶ್ ಪುತ್ರನ್, ಪ್ರದೀಪ್ ರಾವ್, ಸಂತೋಷ್ ಕುಮಾರ್ ಉದ್ಯಾವರ, ಮಾಧವ ಉಪಾಧ್ಯಾಯ, ಶ್ರೀನಿವಾಸ ಪೆಜತ್ತಾಯ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.