ADVERTISEMENT

ಉಡುಪಿ | ಡಿಜಿಟಲ್‌ ಅರೆಸ್ಟ್‌ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:59 IST
Last Updated 2 ಫೆಬ್ರುವರಿ 2025, 14:59 IST
ಕಿರಣ್‌
ಕಿರಣ್‌   

ಉಡುಪಿ: ಡಿಜಿಟಲ್‌ ಅರೆಸ್ಟ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ನಗರದ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರದ ಕಿರಣ್‌ (24) ಬಂಧಿತ ಆರೋಪಿ. ಆತನಿಂದ ₹7 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಕನ್ನಾರ್‌ ಸಂತೋಷ ಕುಮಾರ್‌ ಎಂಬುವರಿಗೆ ಅಪರಿಚಿತರು ಕರೆಮಾಡಿ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್‌ ಸಂಖ್ಯೆಯಿಂದ ಕಾನೂನುಬಾಹಿರ ಜಾಹೀರಾತು ಹಾಗೂ ಸಂದೇಶ ಹೋಗಿದೆ ಎಂದು ತಿಳಿಸಿದ್ದರು.

ADVERTISEMENT

ನಿಮ್ಮ ಮೇಲೆ ಒಟ್ಟು 17 ಎಫ್‌ಐಆರ್‌ ಆಗಿದ್ದು, ಎರಡು ಗಂಟೆಯೊಳಗೆ ನಿಮ್ಮ ಹೆಸರಿನಲ್ಲಿರುವ ಸಂಖ್ಯೆಗಳನ್ನು ಸ್ಥಗಿತಗೊಳಿಸುತ್ತೇವೆ. ನಿಮ್ಮ ಮೇಲೆ ಆರೆಸ್ಟ್‌ ವಾರಂಟ್‌ ಆಗಿದೆ ಎಂದೂ ಹೆದರಿಸಿದ್ದರು.

ಬಳಿಕ ಸಂತೋಷ ಕುಮಾರ್‌ ಅವರಿಗೆ ವಿಡಿಯೊ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿದ್ದು, ಅಂಧೇರಿ ಈಸ್ಟ್‌ ಮುಂಬೈನ ಸೈಬರ್‌ ವಿಭಾಗದ ಇನ್‌ಸ್ಪೆಕ್ಟರ್‌ ಎಂದು ಹೇಳಿದ್ದ. ಅಲ್ಲದೆ, ನಿಮ್ಮ ಆಧಾರ್ ಕಾರ್ಡ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಯಲ್ಲಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂದೂ ತಿಳಿಸಿದ್ದ.

ಆದಾಯದ ಮೂಲ ಪರಿಶೀಲಿಸುವುದಾಗಿ ತಿಳಿಸಿ ಸಂತೋಷ್‌ ಕುಮಾರ್‌ ಅವರ ಬ್ಯಾಂಕ್‌ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು, ನಿಮ್ಮನ್ನು ವರ್ಚುವಲ್‌ ಅರೆಸ್ಟ್‌ ಮಾಡುವುದಾಗಿ ತಿಳಿಸಿ, ಸಂತೋಷ್‌ ಅವರ ಬ್ಯಾಂಕ್‌ ಖಾತೆಯಿಂದ ₹89 ಲಕ್ಷ ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಸಂತೋಷ್‌ ಅವರು ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸೆನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಸೆನ್ ಪೊಲೀಸ್ ಠಾಣೆಯ ಪ್ರವೀಣ ಕುಮಾರ್, ಪ್ರವೀಣ, ರಾಜೇಶ್‌, ಉಡುಪಿ ನಗರ ಠಾಣೆಯ ಎ.ಎಸ್.ಐ. ಸುಭಾಸ್‌, ಪಡುಬಿದ್ರಿ ಠಾಣಾ ಎ.ಎಸ್.ಐ ರಾಜೇಶ್ ಪಿ., ದಿಕ್ಷೀತ್‌, ಸುಕನ್ಯಾ ಮತ್ತು ಜ್ಯೋತಿ ಅವರನ್ನೊಳಗೊಂಡ ತಂಡವು ಕೇರಳದಲ್ಲಿ ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಬಳಿಕ ಆರೋಪಿಯನ್ನು ಧಾರವಾಡದಲ್ಲಿ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.