ADVERTISEMENT

ಉಡುಪಿ | ಸಿಂಧೂರಿಯ ‘ಆತ್ಮವಿಶ್ವಾಸದ ಹೊಲಿಗೆ’: ಸಿಎಂ ಶ್ಲಾಘನೆ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಬಾಲಕಿ

ಬಾಲಚಂದ್ರ ಎಚ್.
Published 24 ಜೂನ್ 2020, 19:30 IST
Last Updated 24 ಜೂನ್ 2020, 19:30 IST
ಸಿಂಧೂರಿ, ಮಾಸ್ಕ್‌ ಹೊಲಿದ ಬಾಲಕಿ
ಸಿಂಧೂರಿ, ಮಾಸ್ಕ್‌ ಹೊಲಿದ ಬಾಲಕಿ   

ಉಡುಪಿ: ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದರೂಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ ಉಡುಪಿಯ ಸಂತೆಕಟ್ಟೆಯ ಬಾಲಕಿ ಸಿಂಧೂರಿ.

ಎಡಗೈ ಮಣಿಕಟ್ಟು ಇಲ್ಲದಿದ್ದರೂ ಒಂದೇ ಕೈ ಬಳಸಿ ಹೊಲಿಗೆ ಯಂತ್ರದ ಮೂಲಕ 15 ಮಾಸ್ಕ್‌ಗಳನ್ನು ಸಿದ್ಧಪಡಿಸಿ ಕೊರೊನಾ ವಾರಿಯರ್ಸ್‌ಗೆ ಹಂಚಿರುವ ಸಿಂಧೂರಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ‌

ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಸಿಂಧೂರಿಗೆ ಶಹಬ್ಬಾಸ್‌ ಹೇಳಿದ್ದು, ‘ಕಿರಿಯ ಕೋವಿಡ್‌ ವಾರಿಯರ್‌ ಸಿಂಧೂರಿ ಕಾರ್ಯ ಹೆಮ್ಮೆಪಡುವಂಥದ್ದು, ಮಾಸ್ಕ್‌ ತಯಾರಿಸುವಾಗ ಆಕೆಯ ಮುಖದ ಮೇಲಿನ ನಗು, ಕೊರೊನಾ ವಿರುದ್ಧದ ಯುದ್ಧ ಗೆಲ್ಲಲು ನಮಗೆಲ್ಲ ಸ್ಫೂರ್ತಿ’ ಎಂದು ಶುಭ ಹಾರೈಸಿದ್ದಾರೆ.

ADVERTISEMENT

ಮೌಂಟ್‌ ರೋಸರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಸಿಂಧೂರಿ, ಅದಮ್ಯ ಆತ್ಮವಿಶ್ವಾಸದಿಂದ ಅಂಗವೈಕಲ್ಯವನ್ನೇ ಮಣಿಸಿದ್ದಾಳೆ. ಈಚೆಗೆ ಮಾಸ್ಕ್‌ ಸಿದ್ಧಪಡಿಸುವಂತೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಿಬ್ಬಂದಿ ಸೂಚಿಸಿದಾಗ, ಅಂಗವೈಕಲ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಅಮ್ಮನಿಂದ ಹೊಲಿಗೆ ಕಲಿತು ಸ್ವತಃ ಮಾಸ್ಕ್ ಸಿದ್ಧಪಡಿಸಿ ಕೊಟ್ಟಿದ್ದಾಳೆ.

ಆಕೆಯ ಆತ್ಮವಿಶ್ವಾಸಕ್ಕೆ ಪೋಷಕರು ಬೆರಗಾಗಿದ್ದಾರೆ. ‘ಆರಂಭದಲ್ಲಿ ಮಾಸ್ಕ್‌ ಹೊಲಿಯುವುದಾಗಿ ಮಗಳು ಹೇಳಿದಾಗ ಏನಾದರೂ ಅವಘಡ ಮಾಡಿಕೊಳ್ಳುತ್ತಾಳೆ ಎಂಬ ಭಯ ಕಾಡಿತ್ತು. ಮೊದಲು ಕೈನಲ್ಲಿ ಹೊಲಿಗೆ ಹಾಕುವುದನ್ನು ಕಲಿತು, ಒಂದೆರಡು ದಿನಗಳಲ್ಲೇ ಯಂತ್ರದಲ್ಲಿ ಹೊಲಿಗೆ ಕಲಿತಳು. ಈಗ ಯಾರ ಸಹಾಯವೂ ಇಲ್ಲದೆ ಮಾಸ್ಕ್‌ ತಯಾರಿಸುತ್ತಾಳೆ’ ಎಂದು ‘ಪ್ರಜಾವಾಣಿ’ ಜತೆ ಮಾತನಾಡುವಾಗ ತಾಯಿ ರೇಣುಕಾ ಕಣ್ಣಂಚ್ಚು ಒದ್ದೆಯಾಗಿತ್ತು.

‘ಸಿಂಧೂರಿ ಹುಟ್ಟಿದಾಗ ಆಕೆಯ ಸ್ಥಿತಿ ಕಂಡು ಮರುಗಿದ್ದೇ ಹೆಚ್ಚು. ಸಮಾಜದ ಸಾಂತ್ವನವೂ ನೋವು ತರಿಸುತ್ತಿತ್ತು. ಆದರೆ, ಈಗ ಆಕೆಯ ಸ್ಥಿತಿಯ ಬಗ್ಗೆ ಮರುಕವಿಲ್ಲ, ಎಲ್ಲರಂತೆ ಸೈಕಲ್‌ ಹೊಡೆಯುತ್ತಾಳೆ, ಆಟ, ಓದಿನಲ್ಲೂ ಮುಂದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಬುಲ್ ಬುಲ್ ಆಗಿದ್ದಾಳೆ. ಯಾರ ಸಹಾಯವಿಲ್ಲದೆ ಆಕೆಯೇ ಶಾಲೆಗೆ ರೆಡಿಯಾಗಿ ಹೊರಡುತ್ತಾಳೆ’ ಎಂದರು ತಾಯಿ.

ಸಿಂಧೂರಿ ತಂದೆ ಸುಧೀರ್ ಈಚೆಗೆ ಗಂಭೀರ ಅಪಘಾತಕ್ಕೆ ತುತ್ತಾಗಿ, ಮನೆಯಲ್ಲೇ ಸ್ಟಿಕ್ಕರ್ ಕಟ್ಟಿಂಗ್ ಮಾಡುತ್ತಿದ್ದಾರೆ. ತಾಯಿ ಶಾಲೆಯಲ್ಲಿ ಅಟೆಂಡರ್. ಅಣ್ಣ ಓದುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.