
ಉಡುಪಿ: ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳ ಕುರಿತು ತಳಮಟ್ಟದಲ್ಲಿಯೇ ಅರಿವು ಮೂಡಿಸುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು. ದೌರ್ಜನ್ಯ ಪ್ರಕರಣಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಸಖಿ ಒನ್ ಸ್ಟಾಪ್ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಅಕ್ಟೋಬರ್ ತಿಂಗಳವರೆಗೆ 180 ಪ್ರಕರಣಗಳು ದಾಖಲಾಗಿದ್ದು, 121 ಪ್ರಕರಣಗಳು ಇತ್ಯರ್ಥವಾಗಿ, 20 ಪ್ರಕರಣಗಳು ನ್ಯಾಯಾಲಯದಲ್ಲಿ, 8 ಪ್ರಕರಣಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ, 9 ಪ್ರಕರಣಗಳು ಕಾನೂನು ಸಮಾಲೋಚನೆ ಹಾಗೂ 22 ಪ್ರಕರಣಗಳು ಆಪ್ತ ಸಮಾಲೋಚನೆಯಲ್ಲಿ ಬಾಕಿ ಉಳಿದಿವೆ ಎಂದು ತಿಳಿಸಿದರು.
ಕುಂದಾಪುರ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಕ್ರಮವಾಗಿ 107 ಪ್ರಕರಣಗಳಲ್ಲಿ 94 ಇತ್ಯರ್ಥವಾಗಿ, 13 ಆಪ್ತ ಸಮಾಲೋಚನೆಯಲ್ಲಿ, ಉಡುಪಿಯಲ್ಲಿ 80ರಲ್ಲಿ 71 ಪ್ರಕರಣಗಳು ಇತ್ಯರ್ಥವಾಗಿ, 8 ಆಪ್ ತಸಮಾಲೋಚನೆಯಲ್ಲಿ ಹಾಗೂ ಕಾರ್ಕಳದಲ್ಲಿ 67 ಪ್ರಕರಣಗಳಲ್ಲಿ 53 ಇತ್ಯರ್ಥವಾಗಿ, 14 ಆಪ್ತ ಸಮಾಲೋಚನೆಯಲ್ಲಿದೆ ಎಂದು ವಿವರಿಸಿದರು.
ಮಹಿಳಾ ಮಂಡಳದ ಒಕ್ಕೂಟದ ಅಧ್ಯಕ್ಷೆ ವಸಂತಿ ಕೊರಡ್ಕಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಪಾಲ್ಗೊಂಡಿದ್ದರು.
ಸಖಿ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ಪ್ರಕರಣಗಳನ್ನು ಹೆಚ್ಚು ಸಮಯ ಉಳಿಸಿಕೊಳ್ಳದೆ ಅವುಗಳನ್ನು ಪ್ರಾಧಿಕಾರಕ್ಕೆ ವರ್ಗಾಯಿಸಬೇಕುಮನು ಪಟೇಲ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.