
ಹೆಬ್ರಿ: ‘ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ–ಸಂಸ್ಕೃತಿ ಕಲಿಸುವ ಮಹತ್ವದ ಕಾರ್ಯವನ್ನು ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಎಸ್.ಆರ್ ಒಂದು ಬ್ರ್ಯಾಂಡ್ ಆಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಶನಿವಾರ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಎಐ ಆಧಾರಿತ ಸಂವಹನಾತ್ಮಕ ಫ್ಲಾಟ್ ಪ್ಯಾನಲ್ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.
ಝೀರೊದಿಂದ ಹೀರೊ ಆಗಿ ಸಂಸ್ಥೆಯು ಬೆಳಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ, ಏಕಾಗ್ರತೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪಾಠಗಳನ್ನು ಓದುವುದು, ಮರುಪಠಣ ಮಾಡುವುದು ಮತ್ತು ಪುನರ್ ಮನನ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸುಲಭವಾಗುತ್ತದೆ ಎಂದರು.
ವಿದ್ಯೆಗೆ ಪೋಷಕರ ಕಿವಿಮಾತು ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಆಧುನಿಕ ಎಐ ಆಧಾರಿತ ಶಿಕ್ಷಣವನ್ನು ನೀಡುವ ಕಾರ್ಯವೂ ಎಸ್.ಆರ್. ಶಿಕ್ಷಣ ಸಂಸ್ಥೆಯಿಂದ ನಡೆಯುತ್ತಿರುವುದು ಶ್ಲಾಘನೀಯ. ಪೋಷಕರು ಮಕ್ಕಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು, ಜೀವನ ಸಾರ್ಥಕವಾಗಿರಬೇಕು. ಬದುಕು ಸಂಭ್ರಮವಾಗಿ ಚಿನ್ನದಂತೆ ಹೊಳೆಯಬೇಕು ಎಂದು ಡಾ. ಧನಂಜಯ ಸರ್ಜಿ ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ಜೆ.ಎಸ್ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕ ಹಾಗೂ ಅಧ್ಯಕ್ಷ ಡಾ. ಜಯರಾಮ ಶೆಟ್ಟಿ ಮಾತನಾಡಿ, ‘ಕರಾವಳಿಯ ಸಂಸ್ಕೃತಿ ಹೆಮ್ಮೆಯಾಗಿದ್ದು, ಕಾಲೇಜಿನಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಪರಿಣಾಮ ವಿದ್ಯಾರ್ಥಿಗಳ ಸಾಧನೆ ಮತ್ತು ಅವರ ಅಭಿವ್ಯಕ್ತಿಯ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಾಧನೆಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಬಿಂಬಿಸುತ್ತವೆ. ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ನಿರ್ಮಾಣದ ಮಹತ್ವದ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಶಿಕ್ಷಕರ ಸಹಕಾರ, ಸೃಜನಶೀಲತೆಯನ್ನು ಮಕ್ಕಳಲ್ಲಿ ಅರಳಿಸುವ ಕಾರ್ಯ ಎಸ್.ಆರ್. ಶಿಕ್ಷಣ ಸಂಸ್ಥೆಯಿಂದ ಸಾಧ್ಯವಾಗಿದೆ’ ಎಂದರು .
ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ನಾಳೆಯ ಸಂಪತ್ತು, ಪೋಷಕರ ತ್ಯಾಗವನ್ನು ಮಕ್ಕಳು ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಎಸ್.ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ತಂದೆ–ತಾಯಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತಿ ಮುಖ್ಯ. ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಮತ್ತು ವೃತ್ತಿಯ ಆಯ್ಕೆಯನ್ನು ಸ್ವತಃ ಮಾಡಿಕೊಳ್ಳಬೇಕು, ಅವರ ಆಸೆಗಳನ್ನು ಈಡೇರಿಸಲು ಪೋಷಕರು ಸಹಕಾರ ನೀಡಬೇಕು. ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಸ್ಥೆಯ ಬೆನ್ನೆಲುಬಾಗಿ ನಿಂತಿದ್ದಾರೆ. 2025ರಲ್ಲಿ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ₹60 ಲಕ್ಷಕ್ಕೂ ಅಧಿಕ ಮೊತ್ತವನ್ನು ಸಹಾಯಧನವಾಗಿ ವಿನಿಯೋಗಿಸಲಾಗಿದೆ’ ಎಂದು ಹೇಳಿದರು.
ಉದ್ಯಮಿ ಬೋಳ ಪ್ರಶಾಂತ ಕಾಮತ್ ಮಾತನಾಡಿದರು. ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹಾಗೂ ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳು, ಶಿಕ್ಷಕರನ್ನು ಸನ್ಮಾನಿಸಲಾಯಿತು. ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಹಸ್ತಾಂತರ ಮತ್ತು ವಿದ್ಯಾರ್ಥಿವೇತನ ವಿತರಣೆ ನಡೆಯಿತು. ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್, ಭಗವತಿ, ಮುಖ್ಯ ಶಿಕ್ಷಕ ಗೋಪಾಲ ಆಚಾರ್, ಕಾಲೇಜು ಸೇರಿದಂತೆ ಪ್ರಮುಖರು, ಗಣ್ಯರು ಇದ್ದರು.
ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಸ್ವಾಗತಿಸಿದರು. ಸುವರ್ಣ ಹಾಗೂ ಹೇಮ, ದೀಪಕ್ ಎನ್. ನಿರೂಪಿಸಿದರು. ಭಗವತಿ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.