ADVERTISEMENT

ಉಡುಪಿ | ಈದ್ ಮೂಲಕ ಮಾನವೀಯ ಕಳಕಳಿ ವ್ಯಕ್ತವಾಗಲಿ

ಈದ್ ಉಲ್‌ ಫಿತ್ರ್‌ ಸಂದೇಶ

​ಪ್ರಜಾವಾಣಿ ವಾರ್ತೆ
Published 23 ಮೇ 2020, 19:45 IST
Last Updated 23 ಮೇ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ಧರ್ಮದ ಹಬ್ಬಗಳಿರಲಿ, ಪರಸ್ಪರ ಸಂತಸ, ಪ್ರೀತಿ ಹಂಚಿಕೊಳ್ಳಲು, ಕಾಳಜಿ ವ್ಯಕ್ತಪಡಿಸಲು, ನಮ್ಮ ನಡುವೆ ಉಂಟಾಗಿರಬಹುದಾದ ಅಂತರಗಳನ್ನು ಹೋಗಲಾಡಿಸಲು, ಬಾಂಧವ್ಯದ ಬೆಸುಗೆಯನ್ನು ಬಲಪಡಿಸಲು ಅತ್ಯುತ್ತಮ ಅವಕಾಶಗಳು. ಈದ್ ಉಲ್ ಫಿತ್ರ್ ಮನುಕುಲಕ್ಕಾಗಿ ಕುರಾನ್‌ ಗ್ರಂಥ ಅವತೀರ್ಣಗೊಂಡ ಪವಿತ್ರ ರಂಜಾನ್‌ ತಿಂಗಳ ಮುಕ್ತಾಯಗೊಳ್ಳುವಾಗ ಆಚರಿಸುವ ಹಬ್ಬ.

ಮುಸ್ಲಿಮರಿಗೆ ಮೂವತ್ತು ದಿನಗಳ ಉಪವಾಸ ಹಾಗೂ ವಿಶೇಷ ಆರಾಧನೆಗಳ ಬಳಿಕ ಉಡುಗೊರೆಯಾಗಿ ಬರುವ ಅತ್ಯಂತ ವಿಶಿಷ್ಟ ಪ್ರಮುಖ ಹಬ್ಬ. ಈದ್‌ ಮುಸ್ಲಿಮನ ಪಾಲಿಗೆ ಅತ್ಯಂತ ಸಂಭ್ರಮದ ದಿನ. ಫಿತ್ರ್ ಎಂದರೆ ಉಪವಾಸ ಮುರಿಯುವುದು ಎಂದರ್ಥ. ಹಬ್ಬದ ನಮಾಜ್ ಮಾಡುವ ಮೊದಲೇ ಧವಸಧಾನ್ಯಗಳನ್ನು ವಿತರಿಸಿ ಸುತ್ತಮುತ್ತಲಲ್ಲಿ ಹಬ್ಬದ ದಿನ ಯಾರೂ ಉಪವಾಸ ಇಲ್ಲ ಎಂದು ಖಾತರಿಪಡಿಸಿಕೊಂಡ ಬಳಿಕವೇ ಮನೆಯಲ್ಲಿ ಹಬ್ಬ ಆಚರಿಸುವುದು ವೈಶಿಷ್ಟ್ಯ

ಆದರೆ, ಈ ಬಾರಿ ಈದ್‌ ಹಲವು ಪೀಳಿಗೆಗಳಲ್ಲೇ ಕಂಡು ಕೇಳರಿಯದ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಬಂದಿದೆ. ಸಂಭ್ರಮದ ಸೆಲೆ ಇರಬೇಕಾದಲ್ಲಿ ಸಂಕಟ ಮನೆಮಾಡಿದೆ. ಕೊರೊನಾ ಸೋಂಕು ಇಡೀ ಮನುಕುಲದ ನೆಮ್ಮದಿ ಕೆಡಿಸಿಬಿಟ್ಟಿದೆ. ಸರ್ಕಾರಗಳು, ವಿಜ್ಞಾನ, ವೈದ್ಯಕೀಯ ರಂಗ, ತಂತ್ರಜ್ಞಾನ ವ್ಯವಸ್ಥೆ ಸೋಂಕು ನಾಶಕ್ಕೆ ಶ್ರಮಿಸುತ್ತಿವೆ.

ADVERTISEMENT

ಬಡವರು, ಕಾರ್ಮಿಕರು, ರೈತರು, ಮಹಿಳೆಯರು, ಮಕ್ಕಳು, ಸಣ್ಣಪುಟ್ಟ ವ್ಯಾಪಾರಿಗಳು, ಸ್ವಉದ್ಯೋಗಿಗಳು, ಉದ್ಯೋಗಿಗಳು ಕಂಗಾಲಾಗಿದ್ದಾರೆ. ಕಾರ್ಮಿಕರಂತೂ ಅಕ್ಷರಶಃ ಬೀದಿಪಾಲಾಗಿದ್ದಾರೆ. ಈ ಸ್ಥಿತಿಯಲ್ಲಿ ಈದ್‌ ಆಚರಣೆ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮೊಳಗಿನ ಮಾನವೀಯ ಕಳಕಳಿಯನ್ನು ಇನ್ನಷ್ಟು ಬಲಪಡಿಸಿಕೊಂಡು ಈ ಬಾರಿಯ ಈದ್ ಆಚರಿಸೋಣ.

ಈ ಬಾರಿಯ ಈದ್ ಪರಸ್ಪರರಿಗಾಗಿ ಜೀವಿಸುವ, ನೆರೆಯವರ ಸಂಕಟಗಳಿಗೆ ಮಿಡಿಯುವ, ಕಷ್ಟಗಳಿಗೆ ಸ್ಪಂದಿಸುವ, ಖುಷಿಪಟ್ಟು ಹಂಚಿಕೊಳ್ಳುವ ಮನೋಭಾವಕ್ಕೆ ಕಾರಣವಾಗಲಿ. ನೆರೆಯವರ ಹಸಿವು ತಣಿಸಿದ ಬಳಿಕವೇ ಹಬ್ಬ ಆಚರಿಸು ಎಂಬ ಶ್ರೇಷ್ಠ ಸಂದೇಶವನ್ನು ಪಾಲಿಸೋಣ.

– ಮುಹಮ್ಮದ್ ಯಾಸೀನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.