ADVERTISEMENT

ಉಡುಪಿ | ಹಬ್ಬದ ಋತು: ಗಗನಕ್ಕೇರಿದ ತರಕಾರಿ ದರ

ಅತಿಯಾದ ಮಳೆ: ತರಕಾರಿಗಳ ಲಭ್ಯತೆ ಕೊರತೆ, ಹಣ್ಣುಗಳ ದರವೂ ಏರಿಕೆ

ನವೀನ್ ಕುಮಾರ್ ಜಿ.
Published 8 ಆಗಸ್ಟ್ 2025, 4:03 IST
Last Updated 8 ಆಗಸ್ಟ್ 2025, 4:03 IST
ಉಡುಪಿ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಗ್ರಾಹಕರು ತರಕಾರಿ ಖರೀದಿಸಿದರು
ಉಡುಪಿ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಗ್ರಾಹಕರು ತರಕಾರಿ ಖರೀದಿಸಿದರು   
ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ | ವರಮಹಾಲಕ್ಷಿ ಹಬ್ಬಕ್ಕೆ ತರಕಾರಿ ತುಟ್ಟಿ

ಉಡುಪಿ: ಹಬ್ಬದ ಋತು ಆರಂಭವಾಗುತ್ತಿದ್ದಂತೆ ತರಕಾರಿ ಮತ್ತು ಹಣ್ಣು ಹಂಪಲುಗಳ ದರ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ನಾಗರ ಪಂಚಮಿ ಕಳೆದ ನಂತರ ಸಾಲು ಸಾಲು ಹಬ್ಬಗಳು ಬರುವುದರಿಂದ ಪ್ರತಿ ವರ್ಷವೂ ತರಕಾರಿ ದರ ಏರಿಕೆಯಾಗುವುದು ಸಾಮಾನ್ಯವಾಗಿದ್ದರೂ ಈ ಬಾರಿ ವಿಪರೀತ ಮಳೆಯಿಂದಾಗಿ ಕೆಲವೆಡೆ ತರಕಾರಿ ಕೃಷಿ ಹಾನಿಯಾದ ಪರಿಣಾಮ ತರಕಾರಿಗಳ ಲಭ್ಯತೆ ಕಡಿಮೆಯಾಗಿ ಇನ್ನಷ್ಟು ಬೆಲೆ ಏರಿಕೆಯಾಗಿದೆ.

ಶಿವಮೊಗ್ಗ, ಹಾಸನ ಮೊದಲಾದೆಡೆಗಳಿಂದ ಜಿಲ್ಲೆಗೆ ತರಕಾರಿಗಳು ಬರುತ್ತಿದ್ದು, ಈ ಬಾರಿ ಮೇ ತಿಂಗಳಿನಿಂದಲೇ ವಿಪರೀತ ಮಳೆ ಆರಂಭವಾಗಿರುವುದರಿಂದ ಕೆಲವೆಡೆ ತರಕಾರಿಗಳು ತೋಟದಲ್ಲೇ ಕೊಳೆತು ಹೋಗಿವೆ. ಇದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಬಹುತೇಕ ತರಕಾರಿ ಮಾರಾಟಗಾರರು.

ADVERTISEMENT

‘ಸಗಟು ಮಾರುಕಟ್ಟೆಯಲ್ಲಿ ಈಗಾಗಲೇ ಕೆಲವು ತರಕಾರಿಗಳ ಆವಕ ಕಡಿಮೆಯಾಗಿರುವುದರಿಂದ ಬೆಲೆಯಲ್ಲಿ ಏರುಪೇರು ಆಗುತ್ತಿದೆ’ ಎನ್ನುತ್ತಾರೆ ಉಡುಪಿಯ ಸರ್ವೀಸ್‌ ನಿಲ್ದಾಣ ಬಳಿಯ ತರಕಾರಿ ಮಾರಾಟಗಾರ ಜಯಾನಂದ.

‘ನಾಗರ ಪಂಚಮಿ ಹಬ್ಬದ ಬಳಿಕ ತರಕಾರಿಗಳಿಗೆ ವಿಪರೀತ ಬೇಡಿಕೆ ಹೆಚ್ಚಿದೆ. ಬೇಡಿಕೆಗನುಗುಣವಾಗಿ ಕೆಲವು ತರಕಾರಿಗಳು ಲಭ್ಯವಾಗದ ಕಾರಣ ದರ ಏರಿಕೆಯಾಗಿದೆ’ ಎಂದು ಅವರು ತಿಳಿಸಿದರು.

ಕಳೆದ ವಾರ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಟೊಮೆಟೊ ದರ ₹50 ಕ್ಕೇರಿದೆ. ಕೆ.ಜಿಗೆ ₹60 ಇದ್ದ ಬೀನ್ಸ್‌ ಬೆಲೆ ₹90ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಸುವರ್ಣ ಗಡ್ಡೆ ದರ ₹80ಕ್ಕೇರಿದೆ.

ಕರಾವಳಿ ಭಾಗದಲ್ಲಿ ಹಬ್ಬದ ಸಂದರ್ಭಗಳಲ್ಲಿ ವಿವಿಧ ಖಾದ್ಯಗಳಿಗೆ ಮಂಗಳೂರು ಸೌತೆಕಾಯಿಯನ್ನು ಬಳಸಲಾಗುತ್ತಿದೆ. ಈ ಕಾರಣಕ್ಕೆ ಅದಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಕಳೆದ ವಾರ ಕೆ.ಜಿಗೆ ₹40ರ ಆಸುಪಾಸಿನಲ್ಲಿದ್ದ ಮಂಗಳೂರು ಸೌತೆ ದರ ₹80ಕ್ಕೆ ಜಿಗಿದಿದೆ.

ಹಣ್ಣುಗಳಲ್ಲಿ ಡ್ರ್ಯಾಗನ್‌ ಫ್ರೂಟ್‌, ಪೇರಳೆ ಮತ್ತು ದಾಳಿಂಬೆ ದರವೂ ಗಗನಮುಖಿಯಾಗಿದೆ. ಕೆ.ಜಿಗೆ ₹140 ಇದ್ದ ಡ್ರ್ಯಾಗನ್‌ ಫ್ರೂಟ್‌ ದರ ₹180 ದಾಟಿದೆ. ಪೇರಳೆ ದರ ಕೆ.ಜಿಗೆ ₹140 ಹಾಗೂ ದಾಳಿಂಬೆ ಕೆ.ಜಿಗೆ ₹180 ಇದೆ.

ಈಗಾಗಲೇ ಕೆಲವು ತರಕಾರಿಗಳ ದರ ಏರಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ
ಜಯಾನಂದ ತರಕಾರಿ ಮಾರಾಟಗಾರ
ಈ ಬಾರಿ ಜೂನ್‌ ಜುಲೈ ತಿಂಗಳಲ್ಲಿ ನಿರಂತರ ಮಳೆಯಾಗಿರುವುದರಿಂದ ಕೆಲವು ಹಣ್ಣುಗಳ ಲಭ್ಯತೆ ಕೊರತೆ ಉಂಟಾಗಿ ಹಣ್ಣುಗಳ ದರ ಏರಿಕೆಯಾಗಿದೆ
ಸಾದಿಕ್ ಹಣ್ಣಿನ ಮಾರಾಟಗಾರ ‌
ದರ ಏರಿಕೆಯಾದರೂ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣು ಅತಿ ಅಗತ್ಯವಾಗಿದೆ. ಈ ಕಾರಣಕ್ಕೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ
ಶ್ರೀನಿವಾಸ ಮೂರ್ತಿ ಗ್ರಾಹಕ

ಬಾಳೆಹಣ್ಣಿನ ದರ ಏರಿಕೆ

ನಾಗರ ಪಂಚಮಿ ಬಳಿಕ ಏಲಕ್ಕಿ ಬಾಳೆಹಣ್ಣಿಗೆ ವಿಪರೀತ ಬೇಡಿಕೆ ಕುದುರಿದ್ದು ಕಳೆದ ವಾರ ಕೆ.ಜಿಗೆ ₹80ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆ ಹಣ್ಣಿನ ದರವು ₹120ರ ಗಡಿ ದಾಟಿದೆ. ಕೆ.ಜಿಗೆ ₹60ರ ಆಸುಪಾಸಿನಲ್ಲಿದ್ದ ನೇಂದ್ರ ಬಾಳೆ ಹಣ್ಣಿನ ದರ ₹80ಕ್ಕೆ ಏರಿಕೆಯಾಗಿದೆ. ‘ವರಮಹಾಲಕ್ಷ್ಮಿ ಹಬ್ಬ ಬಂದಿರುವುದರಿಂದ ಏಲಕ್ಕಿ ಬಾಳೆಹಣ್ಣಿನ ದರ ವಿಪರೀತ ಏರಿಕೆಯಾಗಿದೆ. ನವರಾತ್ರಿ ಹಬ್ಬ ಕಳೆಯುವವರೆಗೂ ಏಲಕ್ಕಿ ಬಾಳೆ ಹಣ್ಣಿನ ದರ ಕೆ.ಜಿಗೆ ₹100ರಿಂದ ಕೆಳಗಿಳಿಯುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಹಣ್ಣಿನ ಮಾರಾಟಗಾರ ಸಾದಿಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.