ADVERTISEMENT

ಪಡುಬಿದ್ರಿ: ಎರಡು ಕಡೆ ಅಗ್ನಿ ಅನಾಹುತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:40 IST
Last Updated 11 ಆಗಸ್ಟ್ 2022, 4:40 IST
ಪಡುಬಿದ್ರಿ ನಡ್ಸಾಲು ಗ್ರಾಮದ ಕಣ್ಣಂಗಾರ್‌ನ ಬೈಪಾಸ್ ಬಳಿಯ ಸುಶೀಲಾ ಗಾಣಿಗ ಮಾಲೀಕತ್ವದ ಗಾಣಿಗರ ಆಯಿಲ್ ಮಿಲ್‌ಗೆ ಬೆಂಕಿ ಹೊತ್ತಿಕೊಂಡು ತೆಂಗಿನಕಾಯಿ ಸುಟ್ಟು ಕರಕಲಾಗಿದೆ.
ಪಡುಬಿದ್ರಿ ನಡ್ಸಾಲು ಗ್ರಾಮದ ಕಣ್ಣಂಗಾರ್‌ನ ಬೈಪಾಸ್ ಬಳಿಯ ಸುಶೀಲಾ ಗಾಣಿಗ ಮಾಲೀಕತ್ವದ ಗಾಣಿಗರ ಆಯಿಲ್ ಮಿಲ್‌ಗೆ ಬೆಂಕಿ ಹೊತ್ತಿಕೊಂಡು ತೆಂಗಿನಕಾಯಿ ಸುಟ್ಟು ಕರಕಲಾಗಿದೆ.   

ಪಡುಬಿದ್ರಿ: ಪಡುಬಿದ್ರಿಯಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯೇಕ ಎರಡು ಕಡೆಗಳಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ನಡ್ಸಾಲು ಗ್ರಾಮದ ಕಣ್ಣಂಗಾರ್‌ನ ಬೈಪಾಸ್ ಬಳಿಯ ಸುಶೀಲಾ ಗಾಣಿಗ ಮಾಲೀಕತ್ವದ ಗಾಣಿಗರ ಮಿಲ್‌ನಲ್ಲಿ ₹ 3 ಲಕ್ಷಕ್ಕೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನ ಕಾಯಿ ಬೆಂಕಿಗಾಹುತಿಯಾಗಿದೆ.

ಕೊಬ್ಬರಿ ಒಣಗಿಸಲು ಮಂಗಳವಾರ ರಾತ್ರಿ ಕೂಡ ಮಿಲ್‌ನವರು ಅಣಿಗೊಳಿಸಿದ್ದರು. ಮಾಲೀಕರಿಗೆ ಸ್ಥಳೀಯರು ಬೆಳಿಗ್ಗೆ ಈ ಅವಘಡದ ಸುದ್ದಿ ಮುಟ್ಟಿಸಿದ್ದಾರೆ.

ADVERTISEMENT

ಗೋದಾಮಿನಲ್ಲಿ ತೆಂಗಿನಕಾಯಿ ದಾಸ್ತಾನು ತುಂಬಿತ್ತು. ಗೋದಾಮಿನ ಗೋಡೆಯೂ ಬಿರುಕು ಬಿಟ್ಟಿದ್ದು ಅಲ್ಲಿಂದ ತೆಂಗಿನ ಕಾಯಿಗಳ ತೆರವು ಕಾರ್ಯವನ್ನೂ ನಡೆಸಲಾಗಿದೆ. ಹೆಜಮಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಾಣೇಶ್ ಸಹಿತ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣೆ ಸಮೀಪದ ಪಂಚಾಯಿತಿ ಕಟ್ಟಡದಲ್ಲಿರುವ ದಿನೇಶ್ ಅವರಿಗೆ ಸೇರಿದ ಅವಿಘ್ನ ಅಕ್ವೇರಿಯಂ ಅಂಗಡಿಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಮಳಿಗೆಯಲ್ಲಿನ ಮೀನುಗಳು, ಮಾರಾಟದ ಲವ್ ಬರ್ಡ್ಸ್‌ಗಳ ಸಹಿತ ದಿನಸಿ ಸಾಮಾನು ಸೇರಿ ಸುಮಾರು ₹ 4 ಲಕ್ಷ ಮೌಲ್ಯದ ಸೊತ್ತು ಹಾನಿಯಾಗಿದೆ. ಉಡುಪಿಯ ಅಗ್ನಿ ಶಾಮಕ ದಳದ ತುಕುಡಿಯು ಎರಡೂ ಕಡೆಗಳಿಗೆ ತೆರಳಿ, ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಹಾಗೂ ಗ್ರಾಮ ಲೆಕ್ಕಾಧಿಕಾರಿ ಎರಡೂ ಕಡೆಗಳಿಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.