ADVERTISEMENT

‌ಉಡುಪಿ| ಮೀನುಗಾರರಿಗೂ ಸೌಲಭ್ಯ ಕಲ್ಪಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:23 IST
Last Updated 21 ಜನವರಿ 2026, 2:23 IST
ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್‌ ಸುವರ್ಣ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್‌ ಸುವರ್ಣ ಉದ್ಘಾಟಿಸಿದರು   

ಉಡುಪಿ: ಮೀನುಗಾರರು ತಮ್ಮ ಜೀವವನ್ನು ಪಣವಾಗಿಟ್ಟು ಮೀನುಗಾರಿಕೆಯಲ್ಲಿ ತೊಡಗುತ್ತಾರೆ. ಕೃಷಿಕರಿಗೆ ಬೆಂಬಲ ಬೆಲೆ, ಬೆಳೆ ವಿಮೆ ಸೌಲಭ್ಯ, ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ನೀಡುವಂತೆ ಮತ್ಸ್ಯ ಕ್ಷಾಮದ ಸಂದರ್ಭದಲ್ಲಿ ಅವರಿಗೂ ₹ 5ಲಕ್ಷ ವರೆಗೆ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಸಹಯೋಗದೊಂದಿಗೆ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಮಂಗಳವಾರ ನಗರದ ದಿ ಓಷ್ಯನ್ ಪರ್ಲ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರವ್ಯಾಪಿ ಮೀನುಗಾರಿಕೆಗೆ ಏಕರೂಪದ ಕಾನೂನು ಜಾರಿಗೊಳಿಸಬೇಕು ಹಾಗೂ ಕರಾವಳಿಯ ಮೀನುಗಾರರಿಗೆ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದೂ ಅವರು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಸಾಕಷ್ಟಿದೆ. ಈ ಕ್ಷೇತ್ರವನ್ನು ಮತ್ತಷ್ಟು ದೃಢಪಡಿಸಲು ಸಹಕಾರಿಗಳು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಅಶೋಕಕುಮಾರ್ ಬಲ್ಲಾಳ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿಪ್ರಸಾದ ಶೆಟ್ಟಿ ಬೆಳಪು, ಯೂನಿಯನ್ ನಿರ್ದೇಶಕರಾದ ಗಂಗಾಧರ ಶೆಟ್ಟಿ, ಪ್ರಸಾದ ಶೆಟ್ಟಿ, ವೈ. ಸುಧೀರ್, ಅಲೆವೂರು ಹರೀಶ ಕಿಣಿ, ಅರುಣ್ ಕುಮಾರ್ ಹೆಗ್ಡೆ, ಶ್ರೀಧರ ಪಿ.ಎಸ್., ಸುರೇಶ ರಾವ್ ಉಪಸ್ಥಿತರಿದ್ದರು.

ಸಹಕಾರಿ ಯೂನಿಯನ್ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿದರು. ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಎಸ್.ಎನ್. ಸಂತೋಷಕುಮಾರ್ ಮತ್ತು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ಬಿ.ಬಿ. ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.