ADVERTISEMENT

ಕೈಕಾಲಿಗೆ ಕೋಳ ಹಾಕಿಕೊಂಡು ಸಮುದ್ರದಲ್ಲಿ ಮೂರುವರೆ ಕಿ.ಮೀ ಈಜಿ ದಾಖಲೆ!

66 ವರ್ಷದ ಗಂಗಾಧರ್ ಜಿ.ಕಡೇಕಾರ್ ಗೋಲ್ಡನ್ ಬುಕ್ ಆಫ್‌ ವರ್ಲ್ಡ್‌ ರೆಕಾರ್ಡ್‌ ಸಾಧನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 15:37 IST
Last Updated 24 ಜನವರಿ 2022, 15:37 IST
ಗಂಗಾಧರ್ ಜಿ.ಕಡೇಕಾರ್
ಗಂಗಾಧರ್ ಜಿ.ಕಡೇಕಾರ್   

ಉಡುಪಿ: ಕೈ ಹಾಗೂ ಕಾಲಿಗೆ ಕೋಳ ಹಾಕಿಕೊಂಡು ಸಮುದ್ರದಲ್ಲಿ ಮೂರೂವರೆ ಕಿ.ಮೀ. ಈಜುವ ಮೂಲಕ 66 ವರ್ಷ ಪ್ರಾಯದ ಗಂಗಾಧರ್ ಜಿ.ಕಡೇಕಾರ್ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದಾರೆ.

ಕಿದಿಯೂರು ಪಡುಕರೆ ಬಳಿಯ ಶ್ರೀದೇವಿ ಭಜನಾ ಮಂದಿರದ ಬಳಿಯ ಕಡಲಿನಲ್ಲಿ ಸೋಮವಾರ ಬೆಳಿಗ್ಗೆ 7.50ಕ್ಕೆ ಕೈಗೆ ಕೋಳ ಹಾಗೂ ಕಾಲಿಗೆ ಸರಪಳಿ ಬಿಗಿದುಕೊಂಡು ಸಮುದ್ರಕ್ಕೆ ಹಾರಿದ ಗಂಗಾಧರ್, ನಿರಂತರವಾಗಿ 5 ಗಂಟೆ 35 ನಿಮಿಷಗಳ ಕಾಲ ಈಜಿ ದಾಖಲೆ ನಿರ್ಮಾಣ ಮಾಡಿದರು.

ಸಮುದ್ರದಲ್ಲಿ ಅಲೆಗಳ ಉಬ್ಬರ ಹೆಚ್ಚಾಗಿದ್ದರೂ ದೃತಿಗೆಢದ ಗಂಗಾಧರ್‌ ಅಲೆಗಳಿಗೆ ಎದುರಾಗಿ ಡಾಲ್ಫಿನ್ ಮಾದರಿಯಲ್ಲಿ ಈಜುತ್ತ ಗುರಿ ಮುಟ್ಟಿದರು. ತೀರಕ್ಕೆ ಬರುತ್ತಿದ್ದಂತೆ ಗಂಗಾಧರ್ ಅವರಿಗೆ ಚಂಡೆ ವಾದ್ಯಗಳ ಸ್ವಾಗತ ಕೋರಲಾಯಿತು. ಅವರ ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

ADVERTISEMENT

ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಮನೀಷ್‌ ವೈಷ್ಣಯ್‌ ಸ್ಥಳದಲ್ಲೇ ತಾತ್ಕಾಲಿಕ ವಿಶ್ವದಾಖಲೆ ಪ್ರಮಾಣಪತ್ರವನ್ನು ಹಸ್ತಾಂತರಿಸಿ, ದಾಖಲೆಗಳನ್ನು ಪರಿಶೀಲಿಸಿ ಶೀಘ್ರ ಅಧಿಕೃತ ಪ್ರಮಾಣಪತ್ರವನ್ನು ನೀಡುವುದಾಗಿ ಘೋಷಿಸಿದರು.

ಕಳೆದ ವರ್ಷ ಜ.24ರಂದೇ ಗಂಗಾಧರ್ ಕಡೇಕಾರ್ ಅವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದುಕೊಂಡು 1.4 ಕಿ.ಮೀ ಬ್ರೆಸ್ಟ್‌ ಸ್ಟ್ರೋಕ್ ಮಾದರಿಯಲ್ಲಿ ಈಜುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.