ADVERTISEMENT

ಕುಂದಾಪುರ: ಕಳೆಗುಂದಿರುವ ಶಾಲೆಗಳಿಗೆ ಹೊಸ ರಂಗು

ಕನ್ನಡ ಮನಸು ಪ್ರತಿಷ್ಠಾನದ ಸದಸ್ಯರಿಂದ ಸರ್ಕಾರಿ ಕನ್ನಡ ಶಾಲೆ ಉಳಿಸುವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 3:46 IST
Last Updated 2 ಫೆಬ್ರುವರಿ 2022, 3:46 IST
ಕುಂದಾಪುರ ತಾಲ್ಲೂಕಿನ ಕರ್ಕುಂಜೆ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಅನಾವರಣಗೊಳ್ಳುತ್ತಿರುವ ಕರಾವಳಿಯ ಗಂಡು ಕಲೆ ಯಕ್ಷಗಾನದ ಚಿತ್ರ.
ಕುಂದಾಪುರ ತಾಲ್ಲೂಕಿನ ಕರ್ಕುಂಜೆ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಅನಾವರಣಗೊಳ್ಳುತ್ತಿರುವ ಕರಾವಳಿಯ ಗಂಡು ಕಲೆ ಯಕ್ಷಗಾನದ ಚಿತ್ರ.   

ಕುಂದಾಪುರ: ಬೆಂಗಳೂರಿನ ಐ.ಟಿ/ ಬಿ.ಟಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ ಒಂದಷ್ಟು ಗೆಳೆಯರು ಒಟ್ಟಾಗಿ ಹಳ್ಳಿಗಳಲ್ಲಿ ಬಣ್ಣವಿಲ್ಲದೆ ಕಳೆ ಕುಂದಿರುವ ಕನ್ನಡದ ಸರ್ಕಾರಿ ಶಾಲೆಗಳಿಗೆ ಹೊಸ ರಂಗನ್ನು ನೀಡುವ ವಿಶಿಷ್ಟ ಅಭಿಯಾನ ಮಾಡುತ್ತಿದ್ದಾರೆ. ವಾರಾಂತ್ಯದ ಬಿಡುವಿನಲ್ಲಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನವನ್ನು ನಡೆಸುತ್ತಿದ್ದಾರೆ.

ವಾರವಿಡೀ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತುಕೊಳ್ಳುವ ಈ ಯುವ ಮನಸ್ಸುಗಳು ಶುಕ್ರವಾರ ಬರುತ್ತಿದ್ದಂತೆ ಮುಂದಿನ ಎರಡು ದಿನ ರಜಾ ಅವಧಿಯನ್ನು ಕಳೆಯುವ ಬಗ್ಗೆ ಮೊದಲೇ ಯೋಜನೆಯನ್ನು ರೂಪಿಸಿಕೊಂಡು ಕಾರ್ಯಗತಗೊಳಿಸುತ್ತಾರೆ. ಹಾಗಂತ ತಂಡ ಕಟ್ಟಿಕೊಂಡು ಮೋಜು-ಮಸ್ತಿಗಾಗಿ ಊರೂರು ಅಲೆಯುವುದಿಲ್ಲ. ಹಳ್ಳಿಗಳಲ್ಲಿ ಕಳೆಗುಂದಿದ ಕನ್ನಡ ಶಾಲೆಯನ್ನು ಗುರುತಿಸುತ್ತಾರೆ. ದಾನಿಗಳ ನೆರವಿನಿಂದ ತರಲಾದ ಬಣ್ಣದಿಂದ ಶಾಲೆಗೆ ಹೊಸ ಸ್ಪರ್ಶ ನೀಡುತ್ತಾರೆ. ಇದಕ್ಕಾಗಿ ‘ಕನ್ನಡ ಮನಸುಗಳ ಪ್ರತಿಷ್ಠಾನ’ ಹುಟ್ಟು ಹಾಕಿದ್ದಾರೆ. ಪ್ರತಿಷ್ಠಾನದ ಮೂಲಕ ಕನ್ನಡ ಶಾಲೆಯ ಉಳಿಯುವಿಕೆಯ ಪಯಣ ನಿರಂತರವಾಗಿ ಸಾಗುತ್ತಿದೆ.

31 ಜಿಲ್ಲೆಗಳಲ್ಲಿಯೂ ಎರಡೆರಡು ಶಾಲೆಗಳನ್ನು ಆಯ್ದುಕೊಂಡು ಯೋಜನೆ ರೂಪಿಸಿರುವ ಈ ತಂಡ ಈಗಾಗಲೇ ರಾಮನಗರ, ಬೆಂಗಳೂರು, ಮಂಡ್ಯ, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಪೂರೈಸಿ ಇದೀಗ ಉಡುಪಿ ಜಿಲ್ಲೆಗೆ ಬಂದಿದೆ. ತಂಡದ ಸದಸ್ಯರು ಇರುವ ಜಿಲ್ಲೆಯ ಅತ್ಯಂತ ಹಿಂದುಳಿದ ಶಾಲೆಗಳಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗುತ್ತಿದೆ.

ADVERTISEMENT

ರಾಜ್ಯದ 62 ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟಿರುವ ಈ ತಂಡಕ್ಕೆ ಸೂರ್ಯ ಫೌಂಡೇಷನ್ ಪ್ರಧಾನ ನೆರವು ನೀಡುತ್ತಿದೆ. ₹50,000 ದಿಂದ ₹1ಲಕ್ಷದ ತನಕವೂ ಪೇಂಟಿಂಗ್ ವೆಚ್ಚವನ್ನು ಈ ಫೌಂಡೇಷನ್ ಭರಿಸುತ್ತಿದೆ. ಆನ್‌ಲೈನ್ ಮೂಲಕವೂ ಫಂಡಿಂಗ್ ನಡೆಸಲಾಗುತ್ತಿದ್ದು, ವಿದೇಶದಲ್ಲಿ ದುಡಿಯುತ್ತಿರುವ ಕನ್ನಡಿಗರು ಕೂಡ ಸಹಾಯ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಬಲಪಡಿಸುತ್ತಿರುವ ಕನ್ನಡ ಮನಸುಗಳು ತಂಡಕ್ಕೆ ರಾಜ್ಯದ ವಿವಿಧ ಭಾಗಗಳ ಶಾಲೆಗಳಿಂದಲೂ ಸಾಕಷ್ಟು ಮನವಿಗಳು ಬರುತ್ತಿವೆ.

ಕರ್ಕುಂಜೆ ಶಾಲೆಗೆ ಬಣ್ಣದ ಮೆರುಗು: ತಂಡದ ಸದಸ್ಯ ಸ್ಥಳೀಯ ಯುವಕ, ಕನ್ನಡಪರ ಯುವ ಹೋರಾಟಗಾರ ಗಣೇಶ್ ಕೊಡ್ಲಾಡಿ ಅವರ ಬೇಡಿಕೆ ಮೇರೆಗೆ ಕುಂದಾಪುರಕ್ಕೆ ಬಂದ ಕನ್ನಡ ಮನಸುಗಳು ತಂಡದ 60 ಮಂದಿ ಯುವಕ- ಯುವತಿಯರು ಶನಿವಾರ ಕುಂದಾಪುರ ತಾಲ್ಲೂಕಿನ ಕರ್ಕುಂಜೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೂಡಿಗಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬಣ್ಣ ಬಳಿದು, ಚಿತ್ತಾರ ಬಿಡಿಸಿ ಶಾಲೆಯನ್ನು ಶೃಂಗಾರಗೊಳಿಸಿದ್ದಾರೆ. ಜೊತೆಗೆ ಆ ಶಾಲೆಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಿದ್ದಾರೆ.

ಆಯಾ ಜಿಲ್ಲೆಯ ಅಲ್ಲಿನ ವೈಶಿಷ್ಟ್ಯವುಳ್ಳ ಒಂದೊಂದು ದೊಡ್ಡ ಚಿತ್ರಗಳ ವರ್ಣಾಲಂಕಾರದ ಚಿತ್ತಾರ ಮೂಡಿಸಿ ಶಾಲೆಯನ್ನು ಇನ್ನಷ್ಟು ಸುಂದರಗೊಳಿಸುತ್ತಿದ್ದಾರೆ. ಶತಮಾನದ ಅಂಚಿನಲ್ಲಿ ಇರುವ ಕರ್ಕುಂಜೆ ಶಾಲೆಯಲ್ಲಿ ಸ್ಪ್ರೇ ಪೇಂಟ್ ಮೂಲಕ ಬಿಡಿಸಲಾದ ಕರಾವಳಿಯ ಹೆಮ್ಮೆಯ ಗಂಡು ಕಲೆ ಯಕ್ಷಗಾನದ ಚಿತ್ರ ರಸ್ತೆ ನೋಡುಗರನ್ನು ಸೆಳೆಯುತ್ತಿದೆ.

ಶಾಲೆಯಲ್ಲೇ ಊಟ-ನಿದ್ರೆ: ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೈ ತುಂಬಾ ಸಂಬಳ ಪಡೆಯುವ ಉದ್ಯೋಗಿಗಳಾಗಿರುವ ತಂಡದ ಸದಸ್ಯರಲ್ಲಿ ಯಾವುದೇ ಬಿಗುಮಾನಗಳಿಲ್ಲ. ಕಾಯಕವೇ ಕೈಲಾಸ ಎನ್ನುವಂತೆ ಶಾಲೆಯಲ್ಲೇ ಊಟ, ಅಲ್ಲೇ ವಿಶ್ರಾಂತಿ ಪಡೆಯುತ್ತಾರೆ. ವಾರದ ಎರಡು ದಿನಗಳ ರಜೆಯಲ್ಲಿ ಅಂದುಕೊಂಡ ಕಾರ್ಯ ಮುಗಿಸಬೇಕು ಎನ್ನುವ ಬದ್ಧತೆಯನ್ನು ಇಟ್ಟುಕೊಂಡಿರುವ ಅವರು ರಾತ್ರಿ-ಹಗಲೆನ್ನದೆ ಕೆಲಸ ಮುಗಿಸುತ್ತಾರೆ. ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳು, ನೃತ್ಯ, ಹಾಸ್ಯಗಳೊಂದಿಗೆ ಸಮಯವನ್ನು ಹೊಂದಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.‌

‘ಶಾಲೆಯ ಬೇಡಿಕೆಗಳಿಗೂ ಸ್ಪಂದನೆ’
ಶತಮಾನೋತ್ಸವಕ್ಕೆ ಕೇವಲ ಆರು ವರ್ಷಗಳು ಬಾಕಿ ಇರುವ ಶಾಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಬೇಕಿತ್ತು. ಇಲ್ಲಿನ ಗ್ರಾಮ ಪಂಚಾಯಿತಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಗಣೇಶ್ ಕೊಡ್ಲಾಡಿ ಅವರ ಮನವಿಯಂತೆ ಬಂದ ಕನ್ನಡ ಮನಸುಗಳು ತಂಡದವರು ನಮ್ಮ ಶಾಲೆಯನ್ನು ಸುಂದರಗೊಳಿಸುವ ಜತೆಗೆ, ಶಾಲೆಗೆ ಅಗತ್ಯವಿರುವ ಬೇಡಿಕೆಗಳಾದ ಪ್ರಾಜೆಕ್ಟರ್, ಪ್ರಿಂಟರ್, ಟ್ಯೂಬ್‌ಲೈಟ್, ಮ್ಯಾಟ್, 14 ಕೋಣೆಗಳಿಗೆ ಬೇಕಾಗಿರುವ ಫ್ಯಾನ್‌ಗಳನ್ನು ನೀಡಿದ್ದಾರೆ ಎಂದು ಕರ್ಕುಂಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೋತಿಲಾಲ್ ವಿ. ಲಮಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.