ADVERTISEMENT

ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯ ಮುಖ್ಯ: ಪೇಜಾವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:03 IST
Last Updated 21 ಏಪ್ರಿಲ್ 2021, 16:03 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಉಡುಪಿ: ಕೋವಿಡ್ ಎರಡನೇ ಅಲೆ ಜೋರಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪುತ್ತಿಗೆ ಮಠದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ತೀರಾ ಅವಶ್ಯವಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ವೈಭವೀಕರಿಸದೆ ನಡೆಸೋಣ. ನೂರಾರು ಜನ ಸೇರುವ ಕಾರ್ಯಕ್ರಮ ಮುಂದೂಡುವುದು ಒಳಿತು ಎಂದು ಸಲಹೆ ನೀಡಿದರು.

ಮೊದಲು ನಾವು ಸುರಕ್ಷಿತವಾಗಿರೋಣ, ಬದುಕಿದರೆ ಸಾಧನೆ ಮಾಡಬಹುದು. ಆರೋಗ್ಯದ ಕಾಳಜಿ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದ ಶ್ರೀಗಳು, ಕೊರೊನಾದ ಬಗ್ಗೆ ಮುಂಜಾಗ್ರತೆ ಹಾಗೂ ಜನಜಾಗೃತಿ ಅಗತ್ಯ ಎಂದರು.

ADVERTISEMENT

ಶ್ರೀರಾಮಚಂದ್ರನ ದರ್ಶನಕ್ಕೂ ಕಠಿಣ ನಿರ್ಬಂಧ ಹಾಕಲಾಗಿದೆ. ಆರೋಗ್ಯ, ಸಮಾಜದ ದೃಷ್ಟಿಯಿಂದ ಆದೇಶ ಪಾಲಿಸುವುದು ಅವಶ್ಯವಾಗಿದೆ.ಜನರ ಅಸಡ್ಡೆ ಕೊರೊನಾ ಎರಡನೇ ಅಲೆ ಹೆಚ್ಚಾಗಲು ಕಾರಣವಾಗಿದ್ದು, ಮತ್ತಷ್ಟು ನಿರ್ಲಕ್ಷ್ಯ ತೋರಿದರೆ ಸೋಂಕು ಹೆಚ್ಚಾಗಲಿದೆ. ಸೋಂಕಿನಿಂದ ರಕ್ಷಣೆ ಪಯಡೆಬೇಕಾದರೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಬೇಕು. ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು.

ಕಳೆದ ವರ್ಷ ದೇಶದಲ್ಲಿ ಲಾಕ್‍ಡೌನ್‍ನಿಂದ ಸೋಂಕು ಕಡಿಮೆಯಾಯಿತು. ಬಳಿಕ ಎಲ್ಲರೂ ಮೈಮರೆತ ಪರಿಣಾಮ ಕೊರೊನಾ ಬಗೆಬಗೆಯಲ್ಲಿ ಬಾಧಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.