ADVERTISEMENT

500 ವಿದ್ಯುತ್‌ ಕಂಬಗಳು ಧರೆಗೆ; ₹90 ಲಕ್ಷ ನಷ್ಟ

ಹೆಬ್ರಿ ತಾಲ್ಲೂಕಿನಲ್ಲಿ ಗಾಳಿ–ಮಳೆ ಆವಾಂತರ: ಬೆಚ್ಚಿಬಿದ್ದ ಜನರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 6:48 IST
Last Updated 2 ಆಗಸ್ಟ್ 2024, 6:48 IST
ಹೆಬ್ರಿಯ ಮುನಿಯಾಲಿನಲ್ಲಿ ಶಿವಪುರ ಶಿವ ಎಲೆಕ್ಟ್ರಿಕಲ್ಸ್‌ ಸಂಸ್ಥೆಯ ಸಿಬ್ಬಂದಿ ವಿದ್ಯುತ್‌ ಲೈನ್‌ ದುರಸ್ತಿ ಮಾಡುತ್ತಿರುವುದು
ಹೆಬ್ರಿಯ ಮುನಿಯಾಲಿನಲ್ಲಿ ಶಿವಪುರ ಶಿವ ಎಲೆಕ್ಟ್ರಿಕಲ್ಸ್‌ ಸಂಸ್ಥೆಯ ಸಿಬ್ಬಂದಿ ವಿದ್ಯುತ್‌ ಲೈನ್‌ ದುರಸ್ತಿ ಮಾಡುತ್ತಿರುವುದು   

ಹೆಬ್ರಿ: ತಾಲ್ಲೂಕಿನಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಗಾಳಿ– ಮಳೆಯಿಂದಾಗಿ ಕೃಷಿ, ತೋಟಗಾರಿಕೆ ಬೆಳೆ, ಜನ ಜೀವನ ಹಾಗೂ ಮೆಸ್ಕಾಂಗೆ ಭಾರಿ ನಷ್ಟ ಉಂಟಾಗಿದೆ.

ನದಿ ತೋಡುಗಳು ಉಕ್ಕಿ ಹರಿದು ಗದ್ದೆ, ತೋಟಗಳಿಗೆ ಹಾನಿಯಾಗಿದೆ. ಗಾಳಿಯಿಂದಾಗಿ ತಾಲ್ಲೂಕಿನಲ್ಲಿ 35 ಮನೆಗಳಿಗೆ ಹಾನಿಯಾಗಿದೆ. ₹18 ಲಕ್ಷ ವೆಚ್ಚದ ಪ್ರಾಕೃತಿಕ ವಿಕೋಪದ ಪರಿಹಾರವನ್ನು ಸಂತ್ರಸ್ತರಿಗೆ ನೀಡಲಾಗಿದೆ.

ಕೃಷಿ ಹಾನಿ: ತಾಲ್ಲೂಕಿನಲ್ಲಿ 41 ಎಕರೆ ಭತ್ತದ ಕೃಷಿ ನಾಶವಾಗಿದೆ. ನಾಟಿ ಮಾಡಿದ ನೇಜಿ ಕೊಳೆತು ಹೋಗಿದ್ದು, ಗದ್ದೆಯ ಅಂಚುಗಳು ಕೊಚ್ಚಿಕೊಂಡು ಹೋಗಿವೆ. ಸಣ್ಣ ರೈತರು ನಷ್ಟವಾದರೂ ಪರಿಹಾರದ ಹಿಂದೆ ಅಲೆದಾಡಬೇಕೆಂಬ ಕಾರಣಕ್ಕೆ ಪರಿಹಾರಕ್ಕಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ.

ADVERTISEMENT

ಅಂಗಡಿ ಮುಂಗಟ್ಟುಗಳಲ್ಲಿ ವಿದ್ಯುತ್ ಇಲ್ಲದೆ ಜನರು ಸಮಸ್ಯೆ ಎದುರಿಸಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮಾಡಲಾಗದೆ ಮನೆಯಲ್ಲೇ ಕಳೆಯುವಂತಾಗಿದೆ.

ಹೆಬ್ರಿಯ ಮುನಿಯಾಲಿನಲ್ಲಿ ಶಿವಪುರ ಶಿವ ಎಲೆಕ್ಟ್ರಿಕಲ್ಸ್‌ ಸಂಸ್ಥೆಯ ಸಿಬ್ಬಂದಿ ವಿದ್ಯುತ್‌ ಲೈನ್‌ ದುರಸ್ತಿ ಮಾಡುತ್ತಿರುವುದು
ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಸಿಬ್ಬಂದಿಯೊಂದಿಗೆ ನಾವು ಕೆಲಸ ಮಾಡಿದ್ದೇವೆ. ಗಾಳಿ–ಮಳೆಯನ್ನು ಲೆಕ್ಕಿಸದೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟ ಮೆಸ್ಕಾಂ ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುವಂತದ್ದು.
–ಮಿಥುನ್‌ ಶೆಟ್ಟಿ ಬಾವಿಗದ್ದೆ ಚಾರ ಸಾಮಾಜಿಕ ಹೋರಾಟಗಾರ.
ಭಾರಿ ಮಳೆಯಿಂದಾಗಿ ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದು ಪರಿಹಾರ ಒದಗಿಸಲಾಗಿದೆ. ಕೃಷಿ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆದ್ಯತೆ ನೆಲೆಯಲ್ಲಿ ಎಲ್ಲರ ಕೆಲಸಗಳನ್ನು ಮಾಡಿಕೊಳ್ಳಲಾಗುವುದು.
–ಎಸ್.ಎ.ಪ್ರಸಾದ್ ಹೆಬ್ರಿ ತಹಶೀಲ್ದಾರ್
ಮಳೆಯಿಂದಾಗಿ ಈ ಭಾರಿ 41 ಎಕರೆ ಭತ್ತದ ಕೃಷಿ ಗದ್ದೆ ನಾಶವಾಗಿದೆ. ಆದ್ಯತೆ ನೆಲೆಯಲ್ಲಿ ರೈತರಿಗೆ ಪರಿಹಾರ ಸಿಗಲಿದೆ. ಸಮಸ್ಯೆಗೆ ಒಳಗಾದ ಎಲ್ಲ ರೈತರು ಅರ್ಜಿ ಸಲ್ಲಿಸಬೇಕು.
–ಗೋವಿಂದ ನಾಯ್ಕ್ ಸಹಾಯಕ ಕೃಷಿ ನಿರ್ದೇಶಕರು ಕಾರ್ಕಳ.

ಅಡಿಕೆ ಕೃಷಿ ಮೇಲೆ ಪರಿಣಾಮ

ಹೆಬ್ರಿ ತಾಲ್ಲೂಕಿನಾದ್ಯಂತ 5ಸಾವಿರ ತೋಟಗಾರಿಕಾ ಗಿಡ-ಮರ 2ಸಾವಿರ ಅಡಿಕೆ ಮರಗಳಿಗೆ ಹಾನಿಯಾಗಿದೆ. ರಬ್ಬರ್ ಕೋಕೋ ಕಾಳು ಮೆಣಸು ತೆಂಗು ಸೇರಿದಂತೆ ಇನ್ನಿತರ ಬೆಳೆಗಳಿಗೆ ಅಧಿಕ ನಷ್ಟ ಸಂಭವಿಸಿದೆ. ಕಬ್ಬಿನಾಲೆಯಲ್ಲಿ ಒಂದೇ ಮನೆಯ 700 ಅಡಿಕೆ ಮರಗಳು ಸುಳಿ ಗಾಳಿಗಳಿಗೆ ಉರುಳಿ ಬಿದ್ದಿದೆ. ಮಳೆ ಪ್ರಮಾಣ: ಉಡುಪಿ ಜಿಲ್ಲೆಯಲ್ಲಿ ಜುಲೈ ತನಕ 1365ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 1900ಮಿ.ಮೀ ಮಳೆ ಸುರಿದು 40ರಷ್ಟು ಹೆಚ್ಚಾಗಿದೆ. ಹೆಬ್ರಿಯಲ್ಲಿ 1807ಮಿ.ಮೀ ವಾಡಿಕೆ ಮಳೆ ಇದೆ. ಆದರೆ 2137ಮಿ.ಮೀ ನಷ್ಟು ಮಳೆಯಾಗಿದೆ. ಜುಲೈ 16ರಂದು ಹೆಬ್ರಿಯಲ್ಲಿ 202ಮಿ.ಮೀ ಮಳೆ ಸುರಿದಿದೆ.

ಮೆಸ್ಕಾಂ ಕಾರ್ಯಕ್ಕೆ ಮೆಚ್ಚುಗೆ

ಹೆಬ್ರಿ ಮೆಸ್ಕಾಂ ವ್ಯಾಪ್ತಿಯಲ್ಲಿ 500 ವಿದ್ಯುತ್ ಕಂಬಗಳು ಗಾಳಿ–ಮಳೆಗೆ ಧರೆಗೆ ಉರುಳಿದ್ದು ಸರಾಸರಿ ₹90 ಲಕ್ಷ ನಷ್ಟ ಸಂಭವಿಸಿದೆ. ಅಧಿಕ ಪ್ರಮಾಣದಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ. ಮೆಸ್ಕಾಂ ಎಇಇ ನಾಗರಾಜ್ ಜೆಇ ಲಕ್ಷ್ಮೀಶ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವಿದ್ಯುತ್‌ ಗುತ್ತಿಗೆದಾರ ಶಿವಪುರ ಶ್ರೀನಿವಾಸ ಹೆಬ್ಬಾರ್‌ ನೇತೃತ್ವದ ತಂಡ ಹಗಲು ರಾತ್ರಿ ಎನ್ನದೇ ವಿದ್ಯುತ್‌ ಸಂಪರ್ಕ ದುರಸ್ತಿ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಿನಕ್ಕೆ ಸರಾಸರಿಯಂತೆ 20ವಿದ್ಯುತ್ ಕಂಬಗಳು ನೆಲಕ್ಕೆ ಉರುಳುತ್ತಿದ್ದವು. ಒಂದು ಕಡೆಯ ಲೈನ್‌ ದುರಸ್ತಿಯಾಗುತ್ತಿದ್ದಂತೆ ಮತ್ತೊಂದು ಲೈನ್‌ನ ಕಂಬಗಳು ಉರುಳುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.