
ಉಡುಪಿ: ಹೆಚ್ಚಿನ ಗೋಚರತೆಗಾಗಿ ವಾಹನಗಳಲ್ಲಿ ಬಳಸುವ ಹೈಬೀಮ್ ಹೆಡ್‌ಲೈಟ್‌ಗಳ ದುರ್ಬಳಕೆ ಅಧಿಕವಾಗುತ್ತಿರುವುದು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.
ರಾತ್ರಿ ವೇಳೆಗಳಲ್ಲಿ ಹೆಡ್‌ಲೈಟ್‌ಗಳ ಪ್ರಖರವಾದ ಬೆಳಕು ವಿರುದ್ಧ ದಿಕ್ಕಿನಿಂದ ಬರುವ ವಾಹನ ಸವಾರರಿಗೆ ಗೋಚರತೆ ಸಮಸ್ಯೆ ಉಂಟು ಮಾಡಿ ಅಪಘಾತಗಳಿಗೆ ಕಾರಣವಾಗುತ್ತದೆ. ಹೈಬೀಮ್ ಹೆಡ್‌ಲೈಟ್‌ಗಳ ದುರ್ಬಳಕೆ ರಸ್ತೆ ಸುರಕ್ಷತೆಗೆ ಗಂಭೀರ ಸವಾಲಾಗಿಯೂ ಪರಿಣಮಿಸುತ್ತಿದೆ.
ಕಾರುಗಳಿಗೆ ಕಂಪನಿಗಳು ಅಳವಡಿಸಿರುವ ಹೆಡ್‌ಲೈಟ್‌ಗಳಲ್ಲದೆ ಕೆಲವರು ಶೋಕಿಗಾಗಿ ಹೈಬೀಮ್ ಲೈಟ್‌ಗಳನ್ನು, ಬ್ಲಿಂಕ್ ಆಗುವ ಲೈಟ್‌ಗಳನ್ನು ಬಳಸುತ್ತಾರೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರ ವಾಹನ ಸವಾರರು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ.
ದಟ್ಟ ಮಂಜು, ದೂಳು, ಮಳೆಯ ಸಂದರ್ಭದಲ್ಲಿ ಹೆಚ್ಚಿನ ಗೋಚರತೆಗಾಗಿ ಬಳಸುವ ಫಾಗ್ ಲೈಟ್‌ಗಳನ್ನೂ ಕೆಲವರು ಸಾಮಾನ್ಯ ಸಂದರ್ಭದಲ್ಲೂ ಬಳಸುತ್ತಿರುವುದು ಇತರ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡುತ್ತದೆ. ನಗರದಲ್ಲೂ ಇಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ ಎನ್ನುತ್ತಾರೆ ವಾಹನ ಸವಾರರು.
ರಾತ್ರಿ ವೇಳೆ ಸಂಚರಿಸುವಾಗ ಕೆಲವು ವಾಹನ ಸವಾರರು ಹೆಡ್‌ಲೈಟ್‌ಗಳನ್ನು ಡಿಮ್ ಮತ್ತು ಡಿಪ್ ಮಾಡುವುದಿಲ್ಲ ಇದರಿಂದ ಅಪಾಯ ಎದುರಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ವಾಹನಗಳ ಹೆಡ್‌ಲೈಟ್‌ಗಳನ್ನು ರಾತ್ರಿವೇಳೆ ಸಮರ್ಪಕವಾಗಿ ಬಳಸುವಂತೆ ಸವಾರರಲ್ಲಿ ಜಾಗೃತಿ ಮೂಡಿಸುವ ಅಗತ್ಯವೂ ಇದೆ ಎಂದೂ ಹೇಳುತ್ತಾರೆ.
ಹೈಬೀಮ್ ಲೈಟ್‌ಗಳಿಂದಾಗಿ ಮುಂಭಾಗದಿಂದ ಬರುವ ವಾಹನ ಸವಾರರಲ್ಲಿ ತಾತ್ಕಾಲಿಕ ಕುರುಡುತನ ಉಂಟು ಮಾಡುತ್ತದೆ. ನಿರಂತರವಾಗಿ ಹೈಬೀಮ್ ಬೆಳಕು ಕಣ್ಣಿಗೆ ಬಿದ್ದರೆ ಕಣ್ಣಿನ ಆರೋಗ್ಯದ ಮೇಲೂ ಅದು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ವಾಹನ ಕಂಪನಿಗಳು ನೀಡುವ ಲೈಟ್‌ಗಳಿಗೆ ಬದಲಾಗಿ ಕೆಲವರು ಅತಿ ಪ್ರಕಾಶಮಾನವಾದ ಎಲ್‌ಇಡಿ, ಎಚ್‌ಐಡಿ ದೀಪಗಳನ್ನು ಬಳಸುತ್ತಿರುವುದು ನಗರದಲ್ಲೂ ಕಂಡು ಬರುತ್ತಿದೆ. ಇನ್ನೊಂದು ವಾಹನದ ಹಿಂಭಾಗದಲ್ಲಿ ಸಂಚರಿಸುವಾಗಲೂ ಹೈಬೀಮ್ ಲೈಟ್ ಬಳಸಿದರೆ ಮುಂದಿನ ವಾಹನದ ಕನ್ನಡಿಗೆ ಆ ಬೆಳಕು ಬಿದ್ದು ಚಾಲಕನಿಗೆ ತೊಂದರೆ ಉಂಟಾತ್ತದೆ.
ವಾಹನಗಳ ಹೆಡ್‌ಲೈಟ್‌ಗಳ ಪ್ರಕರವಾದ ಬೆಳಕಿನಿಂದಾಗಿ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ. ರಾತ್ರಿ ವೇಳೆ ರಸ್ತೆ ಬದಿ ನಡೆದಾಡುವಾಗ ಇಂತಹ ಬೆಳಕಿನಿಂದ ದಾರಿಕಾಣದಂತಾಗುತ್ತದೆ ಎಂದು ಪಾದಚಾರಿಗಳು ದೂರುತ್ತಾರೆ.
ಕೆಲವರು ಹೈಬೀಮ್ ಲೈಟ್‌ಗಳನ್ನು ಆಟೊ ಮೊಬೈಲ್ ಅಂಗಡಿಗಳಲ್ಲಿ ತಮ್ಮ ವಾಹನಗಳಿಗೆ ಅಳವಡಿಸಿಕೊಂಡರೆ. ಇನ್ನೂ ಕೆಲವರು ಆನ್‌ಲೈನ್‌ಗಳಿಂದಲೂ ತರಿಸಿಕೊಳ್ಳುತ್ತಾರೆ. ಇ ಕಾಮರ್ಸ್ ವೇದಿಕೆಗಳಲ್ಲೂ ಪ್ರಖರ ಬೆಳಕನ್ನು ಹೊರಸೂಸುವ ಲೈಟ್‌ಗಳು ಸಿಗುತ್ತಿವೆ.
ಸಾಮಾನ್ಯ ಸಂದರ್ಭಗಳಲ್ಲಿ ಹೈಬೀಮ್ ಲೈಟ್‌ಗಳನ್ನು ಬಳಸುವ ವಾಹನ ಚಾಲಕರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ನಾವು ಡ್ರೈವಿಂಗ್ ಕಲಿಸುವಾಗ ವಾಹನದ ಹೆಡ್‌ಲೈಟ್ ನಿಯಂತ್ರಣದ ಬಗ್ಗೆ ಡಿಮ್ ಮತ್ತು ಡಿಪ್ ಮೂಡುವ ಬಗ್ಗೆ ತರಬೇತಿ ನೀಡುತ್ತೇವೆ. ರಾತ್ರಿ ವಾಹನ ಚಲಾಯಿಸುವಾಗ ಹೆಡ್‌ಲೈಟ್ ಡಿಮ್ ಮತ್ತು ಡಿಪ್ ಮಾಡದಿದ್ದರೆ ಅಪಘಾತ ಕಟ್ಟಿಟ್ಟ ಬುತ್ತಿರವಿ ವಾಹನ ಚಾಲನಾ ತರಬೇತುದಾರ
‘ಎಐ ಕ್ಯಾಮೆರಾ ಬಂದರೆ ಬೀಳಲಿದೆ ದಂಡ’
‘ಹೈ ಬೀಮ್ ಹೆಡ್‌ಲೈಟ್‌ಗಳ ದುರ್ಬಳಕೆಯನ್ನು ವಾಹನ ತಪಾಸಣೆಯ ಮೂಲಕ ಪತ್ತೆ ಹಚ್ಚುವುದು ಕಷ್ಟದ ಕೆಲಸ. ಎಐ ಕ್ಯಾಮೆರಾಗಳು ಪ್ರಖರ ಬೆಳಕಿನ ಹೆಡ್‌ಲೈಟ್ ಅಳವಡಿಸಿರುವ ವಾಹನಗಳನ್ನು ಪತ್ತೆ ಹಚ್ಚಲಿವೆ. ಜಿಲ್ಲೆಯಲ್ಲಿ ಎಂಟು ಕಡೆಗಳಲ್ಲಿ ಅಂತಹ ಕ್ಯಾಮೆರಾಗಳನ್ನು ಶೀಘ್ರ ಅಳವಡಿಸಲಾಗುವುದು. ಅನಂತರ ಹೈಬೀಮ್ ಲೈಟ್‌ಗಳ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು. ‘ಕಾರುಗಳಿಗೆ ಕಂಪನಿಗಳು ಅಳವಡಿಸುವ ಲೈಟ್‌ಗಳಲ್ಲದೆ ಹೆಚ್ಚವರಿಯಾಗಿ ಅಳವಡಿಸಿರುವುದು ಕಂಡು ಬಂದರೆ ನಾವು ಅದನ್ನು ತೆಗೆಸುತ್ತೇವೆ. ಕೆಲವರು ಕೆಂಪು ಮತ್ತು ನೀಲ ಬಣ್ಣದ ಲೈಟ್‌ಗಳನ್ನು ಬಳಸುತ್ತಾರೆ. ಅಂತಹವು ಕಂಡು ಬಂದರೆ ತೆಗೆಸಲಾಗುವುದು’ ಎಂದು ಅವರು ಹೇಳಿದರು.
‘ಕಾನೂನು ಉಲ್ಲಂಘಿಸುವವರಿಗೆ ದಂಡ ಹಾಕಿ’
‘ವಾಹನಗಳಿಗೆ ಕಂಪನಿಯವರು ಅಳವಡಿಸಿದ ಹೆಡ್‌ಲೈಟ್‌ಗಳಲ್ಲದೆ ಹೆಚ್ಚುವರಿ ಲೈಟ್ ಅಳವಡಿಸಿರುವ ವಾಹನಗಳು ಉಡುಪಿ ನಗರದಲ್ಲಿ ಮಣಿಪಾಲದಲ್ಲಿ ಸಾಕಷ್ಟಿವೆ. ಹಿಂದೆ ಪೊಲೀಸರು ಅಂತಹ ಲೈಟ್‌ಗಳನ್ನು ತೆಗೆಸುತ್ತಿದ್ದರು. ಈಗ ಯಾವುದೇ ಕ್ರಮ ಕೈಗೊಳ್ಳುತ್ತಿರುವುದು ಕಂಡು ಬರುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. ‘ಕೆಲವು ವಾಹನಗಳ ಪ್ರಕರವಾದ ಬೆಳಕಿನಿಂದ ಆಂಬುಲೆನ್ಸ್ ವಾಹನ ಚಾಲಕರಿಗೂ ಸಮಸ್ಯೆ ಉಂಟಾಗುತ್ತಿದೆ. ಇಂತಹ ಲೈಟ್‌ಗಳನ್ನು ಅಳವಡಿಸುವವರಿಗೆ ಸಂಬಂಧವಟ್ಟವರು ದಂಡ ವಿಧಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.