ADVERTISEMENT

ಉಡುಪಿ: ‘ಡಿಜಿಟಲ್ ಪಾವತಿ: ಭಾರತ ವಿಶ್ವಕ್ಕೆ ಮಾದರಿ’

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜು: ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:14 IST
Last Updated 28 ಜುಲೈ 2025, 7:14 IST
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು   

ಕಾರ್ಕಳ: ‘ಇಂದಿನ ಜಾಗತಿಕ ಹಣಕಾಸು ಕ್ಷೇತ್ರಕ್ಕೆ ಹೋಲಿಸಿದರೆ ಭಾರತದ ಯುಪಿಐ, ಡಿಜಿಟಲ್ ಪಾವತಿ ಸಕ್ರಿಯತೆ ಸೇರಿದಂತೆ ಇತರ ಆವಿಷ್ಕಾರಗಳು ಜಗತ್ತಿಗೆ ಮಾದರಿಯಾಗಿವೆ’ ಎಂದು ಜಾಗತಿಕ ಹಣಕಾಸು ಸಂಸ್ಥೆ ನ್ಯೂಯಾರ್ಕ್‌ನ ಜೆ.ಪಿ.ಮೋರ್ಗನ್ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಸುರೇಶ್ ಶೆಟ್ಟಿ ಹೇಳಿದರು.

ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಭಾರತವು ಹಣಕಾಸು ಮತ್ತು ವಿತ್ತೀಯ ವ್ಯವಹಾರಗಳಿಗೆ ಪೂರಕವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇದರಿಂದ ಜಾಗತಿಕವಾಗಿ ದಾಪುಗಾಲಿಡುತ್ತಿದೆ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಹರ್ಷ ಹಾಲಹಳ್ಳಿ ಶುಭ ಹಾರೈಸಿದರು. ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಗೋಪಾಲ್ ಮುಗೇರಾಯ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ ಪದಕ ನೀಡಿ ಪುರಸ್ಕರಿಸಲಾಯಿತು. ಬಯೊಟೆಕ್ನಾಲಜಿ, ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ರೋಬೊಟಿಕ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ADVERTISEMENT

ಉಪ ಪ್ರಾಂಶುಪಾಲ ನಾಗೇಶ್ ಪ್ರಭು, ಪರೀಕ್ಷಾ ನಿಯಂತ್ರಕ ಸುಬ್ರಹ್ಮಣ್ಯ ಭಟ್, ಉಪ ಕುಲಸಚಿವೆ ರೇಖಾ ಭಂಡಾರ್ಕರ್, ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರಿ  ಇನ್‌ಸ್ಟಿಟ್ಯೂಟ್ ಇಂಟರ್‍ಯಾಕ್ಷನ್‌ ನಿರ್ದೇಶಕ ಪರಮೇಶ್ವರನ್, ಸ್ಟೂಡೆಂಟ್ ವೆಲ್‌ಫೇರ್ ಡೀನ್ ನರಸಿಂಹ ಬೈಲಕೇರಿ, ಡೀನ್ ಸುದೇಶ್ ಬೇಕಲ್, ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು. ವಿಟಿಯು ಸ್ಕೀಮ್‌ನ ಪರೀಕ್ಷಾ ನಿಯಂತ್ರಕ ಶ್ರೀನಿವಾಸ್ ರಾವ್ ಬಿ.ಆರ್. ಪದವಿ ಪ್ರದಾನ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.

ಪ್ರಾಂಶುಪಾಲ ನಿರಂಜನ್ ಎನ್. ಚಿಪ್ಳೂಣ್ಕರ್ ವಾರ್ಷಿಕ ವರದಿ ವಾಚಿಸಿ ಸ್ವಾಗತಿಸಿದರು. ಡೀನ್ ಎಕಾಡೆಮಿಕ್ಸ್ ಐ.ಆರ್.ಮಿತ್ತಂತಾಯ ಚಿನ್ನ, ಬೆಳ್ಳಿ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಘೋಷಿಸಿದರು. ಸಹಾಯಕ ಪರೀಕ್ಷಾ ನಿಯಂತ್ರಕ ವೆಂಕಟೇಶ್ ಕಾಮತ್ ವಂದಿಸಿದರು. ವಿದ್ಯಾರ್ಥಿನಿಯರಾದ ನಿಹಾರಿಕಾ, ಶ್ರದ್ಧಾ ಶೇಟ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ನಿರೂಪಿಸಿದರು.

‘ಯುವಜನರು ಭವಿಷ್ಯ ಬೆಳಗಿಸುವ ಶಕ್ತಿ’

ಜಗತ್ತು ನಿರಂತರವಾಗಿ ಬದಲಾಗುತ್ತಿದ್ದು ಆಯಾ ಕಾಲಘಟ್ಟದಲ್ಲಿ ವಿಶಿಷ್ಟ ತಂತ್ರಜ್ಞಾನಗಳು ಮೂಡಿಬರುತ್ತಿವೆ. ವಿದ್ಯಾರ್ಥಿಗಳು ಯಾವುದಕ್ಕೂ ಜೋತುಬೀಳದೆ ಬದಲಾವಣೆಗೆ ತೆರೆದುಕೊಳ್ಳಬೇಕು ಕುತೂಹಲ ಬೆಳೆಸಿಕೊಳ್ಳಬೇಕು. ಪ್ರಸ್ತುತ ನಾವು ಲೆಡ್ಜರ್ ಬ್ಲಾಕ್‌ಚೈನ್ ಕೃತಕ ಬುದ್ಧಿಮತ್ತೆ ಕ್ವಾಂಟಮ್ ಕಂಪ್ಯೂಟಿಂಗ್ ಕುರಿತು ಮಾತನಾಡುತ್ತಿದ್ದೇವೆ. ಇದ್ಯಾವುದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಭಾರತದ ಯುವಜನರು ಧೈರ್ಯಶಾಲಿಗಳಾಗಿದ್ದು ಭವಿಷ್ಯದ ಭಾರತವನ್ನು ಮತ್ತಷ್ಟು ಬೆಳಗಿಸುವ ಶಕ್ತಿಯಾಗಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.