ADVERTISEMENT

ಹೋಟೆಲ್ ಉದ್ಯಮಕ್ಕೆ ಪೆಟ್ಟುಕೊಟ್ಟ ಕೊರೊನಾ

ಮಾಲೀಕರ ಸಂಘದಿಂದ‌ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:16 IST
Last Updated 9 ಜುಲೈ 2020, 16:16 IST
ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.   

ಉಡುಪಿ: ಕೊರೊನಾ ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಹೋಟೆಲ್‌ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯಮಕ್ಕೆ ಪೂರಕವಾದ ಕ್ರಮಕೈಗೊಳ್ಳುವಂತೆ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜೂನ್ 8ರಿಂದ ಜಿಲ್ಲೆಯಲ್ಲಿ ಹೊಟೇಲ್ ಉದ್ಯಮ ಪ್ರಾರಂಭವಾದರೂ ಶೇ 20ರಷ್ಟು ವ್ಯಾಪಾರ ನಡೆಯುತ್ತಿಲ್ಲ. ಪರಿಣಾಮ ಹೋಟೆಲ್‌ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಟ್ಟಡದ ಬಾಡಿಗೆ, ಸಿಬಂದ್ದಿ ವೇತನ, ವಿದ್ಯುತ್ ಬಿಲ್, ಜಿಎಸ್‌ಟಿ ಸೇರಿದಂತೆ ಇತರೆ ವೆಚ್ಚಗಳನ್ನು ಭರಿಸಲಾಗದೆ ಹೋಟೆಲ್‌ಗಳನ್ನು ಮುಚ್ಚುವ ಸ್ಥಿತಿಗೆ ಬಂದಿದೆ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.

ಹೋಟೆಲ್‌ ಸಿಬ್ಬಂದಿಗೆ ಅಲ್ಲಲ್ಲಿ ಕೊರೊನಾ ಸೋಂಕು ತಗುಲಿದ್ದು, ಗ್ರಾಹಕರು ಆತಂಕದಿಂದ ಹೋಟೆಲ್‌ಗಳತ್ತ ಕಾಲಿಡುತ್ತಿಲ್ಲ. ಜಿಲ್ಲಾಡಳಿತ ಸೋಂಕು ಕಂಡುಬಂದರೆ ಸೀಲ್‌ಡೌನ್‌ ಪ್ರಕ್ರಿಯೆಯನ್ನು ಸೀಮಿತಗೊಳಿಸಬೇಕು. ಇದರಿಂದ ಉದ್ಯಮಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದು ಉದ್ಯಮಿಗಳು ಮನವಿಯಲ್ಲಿ ಒತ್ತಾಯಿಸಿದರು.

ADVERTISEMENT

ಈಗಾಗಲೇ ಹೋಟೆಲ್‌ಗಳಿಂದ ಅತಿಯಾದ ತೆರಿಗೆ ವಸೂಲಿ ಮಾಡಲಾಗುತ್ತಿದೆ. ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯೂ ಉದ್ಯಮಕ್ಕೆ ಪೆಟ್ಟುಕೊಟ್ಟಿದೆ. ಇದರ ಮಧ್ಯೆ ನಗರದಲ್ಲಿ ಮೊಬೈಲ್ ಕ್ಯಾಂಟಿನ್‌ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ. ಈ ಬಗ್ಗೆನಗರಸಭೆ ಪೌರಾಯುಕ್ತರಿಗೆ ದೂರು ನೀಡಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋಟೆಲ್ ಉದ್ಯಮವನ್ನು ನಂಬಿ ಸಾವಿರಾರು ಮಂದಿ ಜೀವನ ಸಾಗಿಸುತ್ತಿದ್ದು, ಕೊರೊನಾದಿಂದ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಸಂಘದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಉದ್ಯಮ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ನಿಯೋಗದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ನಾಗೇಶ್ ಭಟ್, ಉಪಾಧ್ಯಕ್ಷ ಡಯಾನ ವಿಠಲ್ ಪೈ, ಲಕ್ಷ್ಮಣ್ ಜಿ. ನಾಯಕ್, ವ್ಯವಸ್ಥಾಪಕ ಅಶೋಕ್ ಬಿ.ಪೈ, ಶ್ರೀಧರ್ ಭಟ್, ಕಾಶಿರಾಮ್ ಪೈ, ಸಂದೀಪ್ ನಾಯಕ್, ಶಿವಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ದಿಲ್ಲೇಶ್ ಶೆಟ್ಟಿ, ಉಲ್ಲಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.