
ಪಡುಬಿದ್ರಿ: ಕೈಗಾರಿಕೆಗಳ ನಿರ್ಮಾಣ, ಬೆಳವಣಿಗೆಗೆ ಸಾವಿರಾರು ಎಕ್ರೆ ಭೂಮಿ ನೀಡಿರುವ ಕಾಪು ತಾಲ್ಲೂಕಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ನಿವೇಶನವೇ ಇಲ್ಲದಂತಾಗಿದೆ. ಸಾವಿರಾರು ಜನ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದಾರೆ.
ಪುರಸಭೆ ಹಾಗೂ 16 ಗ್ರಾಮ ಪಂಚಾಯಿತಿಯನ್ನು ಹೊಂದಿರುವ ತಾಲ್ಲೂಕಿನಲ್ಲಿ 3,825 ಮಂದಿ ನಿವೇಶನ ರಹಿತರ ಪಟ್ಟಿ ಇದೆ. ನಿವೇಶನ ಹಂಚಲು ಜಾಗದ ಕೊರತೆ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ನೀಡಲು ಆಗದೆ ಬಾಕಿಯಾಗಿದೆ.
ನಿವೇಶನ ರಹಿತರ ವಿವರ: ಕಾಪು ಪುರಸಭೆ ವ್ಯಾಪ್ತಿಯಲ್ಲಿ 113, ಉಚ್ಚಿಲ ಬಡಾ– 227, ಬೆಳಪು– 171, ಬೆಳ್ಳೆ– 363, ಹೆಜಮಾಡಿ– 225, ಇನ್ನಂಜೆ– 62, ಕಟಪಾಡಿ– 113, ಕೋಟೆ– 148, ಕುರ್ಕಾಲು– 170, ಕುತ್ಯಾರು– 97, ಮಜೂರು– 240, ಮುದರಂಗಡಿ– 173, ಪಡುಬಿದ್ರಿ– 663, ಪಲಿಮಾರು– 337, ಶಿರ್ವ– 258, ಎರ್ಮಾಳು ತೆಂಕ 218 ಹಾಗೂ ಎಲ್ಲೂರಿನಲ್ಲಿ 247 ನಿವೇಶನ ರಹಿತರಿದ್ದಾರೆ. ಇವರೆಲ್ಲರೂ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ನಿವೇಶನ ಸಿಗದೆ ಇಂದು ನಾಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗ ಸಲ್ಲಿಸಿದ ಅರ್ಜಿಗಳ ಪರಿಶೀಲನೆಯಾದ ಬಳಿಕ ನಿವೇಶನ ರಹಿತರ ಪಟ್ಟಿ ಅಧಿಕಾರಿಗಳು ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲೆಲ್ಲಿ ಜಾಗ: ನಿವೇಶನ ರಹಿತರಿಗೆ ಜಾಗ ನೀಡಲು ಬೆಳ್ಳೆಯ ಕಟ್ಟಿಂಗೇರಿಯಲ್ಲಿ 5 ಎಕರೆ ಜಾಗವಿದೆ. ಪಲಿಮಾರಿನಲ್ಲಿ 5 ಎಕ್ರೆ ಜಾಗವಿದ್ದು, ಇದರಲ್ಲಿ ನಂದಿಕೂರಿನಿಂದ ವಿವಿಧ ಕಡೆ ವಿದ್ಯುತ್ ಟವರ್, ತಂತಿಗಳ ಸಂಪರ್ಕ ಇರುವುದರಿಂದ ಈ ಸ್ಥಳ ಹೊರತುಪಡಿಸಿ 2 ಎಕರೆ ಜಾಗ ಗುರುತಿಸಲಾಗಿದೆ. ಇದರ ಸರ್ವೇ ಕಾರ್ಯ ಇನ್ನಷ್ಟೆ ನಡೆಯಬೇಕಿದೆ. ಮುದರಂಗಡಿಯಲ್ಲೂ 5 ಎಕರೆ ಜಾಗ ಗುರುತಿಸಲಾಗಿದ್ದು, ಸರ್ವೇ ಕಾರ್ಯ ಬಾಕಿಯಿದೆ. ಶಿರ್ವದಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಬಾಕಿಯಾಗಿವೆ.
ಕೈಗಾರಿಕಾ ವಲಯಗಳು: ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕ (ಐಎಸ್‌ಪಿಆರ್‌ಎಲ್), ಕಲ್ಲಿದ್ದಲು ಆಧಾರಿತ ಅದಾನಿ ಪವರ್ ಕಾರ್ಪೊರೇಷನ್, ಪಡುಬಿದ್ರಿಯಲ್ಲಿ ವಿಶೇಷ ಅರ್ಥಿಕ ವಲಯದೊಂದಿಗೆ ಮಧ್ಯಮ, ಸಣ್ಣ, ಭಾರಿ ಗಾತ್ರದ ಕೈಗಾರಿಕೆಗಳು, ನಂದಿಕೂರು, ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್ ಕಾರ್ಯಾಚರಿಸುತ್ತಿವೆ.
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್‌ನ 2ನೇ ಹಂತದ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಟ್ಟಿದ್ದು, ಇದರಿಂದ ಅದಾನಿ ಯೋಜನೆಗೆ ನೀಡಲಾದ 546 ಎಕರೆ ಭೂಮಿ ಕೆಐಎಡಿಬಿ ಕೈಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.