ADVERTISEMENT

ಭಾರತೀಯ ಪುರುಷರ ವೀರ್ಯ ಗುಣಮಟ್ಟ ಕುಸಿತವಾಗಿಲ್ಲ: ಮಣಿಪಾಲದ ಕೆಎಂಸಿ ಅಧ್ಯಯನ ವರದಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:53 IST
Last Updated 24 ಅಕ್ಟೋಬರ್ 2025, 4:53 IST
   

ಉಡುಪಿ: ಕಳೆದ ಹದಿನೇಳು ವರ್ಷಗಳಲ್ಲಿ ದಕ್ಷಿಣ ಭಾರತದ ಪುರುಷರ ವೀರ್ಯದ ಗುಣಮಟ್ಟದಲ್ಲಿ ಯಾವುದೇ ಕುಸಿತ ಕಂಡು ಬಂದಿಲ್ಲ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಅಧೀನದಲ್ಲಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಅಧ್ಯಯನ ವರದಿ ಹೇಳಿದೆ.

ಈ ಅಧ್ಯಯನ ವರದಿಯು ‘ಅಮೆರಿಕನ್‌ ಜರ್ನಲ್‌ ಆಫ್ ಮೆನ್ಸ್‌ ಹೆಲ್ತ್‌’ನಲ್ಲಿ ಪ್ರಕಟವಾಗಿದೆ. 2006ರಿಂದ 2022ರ ಅವಧಿಯಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಆಂಡ್ರಾಲಜಿ ಪ್ರಯೋಗಾಲಯಕ್ಕೆ ಸಂತಾನೋತ್ಪತ್ತಿ ಮೌಲ್ಯಮಾಪನಕ್ಕಾಗಿ ಬಂದ ಸುಮಾರು 12 ಸಾವಿರ ಪುರುಷರ ವೀರ್ಯದ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಮಾಹೆಯ ಹೇಳಿಕೆ ತಿಳಿಸಿದೆ.

ಇದು ಭಾರತದಲ್ಲಿ ನಡೆಸಲಾದ ಅತ್ಯಂತ ದೀರ್ಘಾವಧಿಯ ಮತ್ತು ವ್ಯಾಪಕವಾದ ಸಂಶೋಧನೆಗಳಲ್ಲಿ ಒಂದಾಗಿದ್ದು, ವೀರ್ಯ ಸಂಖ್ಯೆ, ಚಲನಶೀಲತೆ, ರಚನೆ ಸೇರಿದಂತೆ ಪ್ರಮುಖ ಮಾನದಂಡಗಳನ್ನು ವಿಶ್ಲೇಷಿಸಲಾಗಿದೆ.

ADVERTISEMENT

ಅಂಕಿ–ಅಂಶಗಳ ವಿಶ್ಲೇಷಣೆಯ ಪ್ರಕಾರ ಅಧ್ಯಯನದ ಅವಧಿಯಲ್ಲಿ ಯಾವುದೇ ಗಣನೀಯ ಬದಲಾವಣೆ ಕಂಡುಬಂದಿಲ್ಲ. ಇದರಿಂದ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವೀರ್ಯ ಗುಣಮಟ್ಟ ಕುಸಿತವು ಎಲ್ಲೆಡೆಗೆ ಅನ್ವಯಿಸುವುದಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದೂ ಹೇಳಿಕೆ ತಿಳಿಸಿದೆ.

‘ದಕ್ಷಿಣ ಭಾರತದ ಪುರುಷರ ವೀರ್ಯದ ಗುಣಮಟ್ಟದಲ್ಲಿ ಯಾವುದೇ ಆತಂಕಕಾರಿ ಕುಸಿತವಾಗಿಲ್ಲ ಎಂಬುದನ್ನು ನಮ್ಮ ಅಧ್ಯಯನ ದೃಢಪಡಿಸುತ್ತದೆ. ಪುರುಷ ಸಂತಾನೋತ್ಪತ್ತಿ ಸಮಸ್ಯೆಗಳು ಹೆಚ್ಚಾಗುತ್ತಿದ್ದರೂ, ಅದು ಕಾಲಾನುಗತ ಗುಣಮಟ್ಟದ ಕುಸಿತಕ್ಕಿಂತ ಇತರ ಕಾರಣಗಳಿಂದಾಗಿರಬಹುದು ಎಂಬುದನ್ನು ನಮ್ಮ ಅಧ್ಯಯನ ಸೂಚಿಸುತ್ತದೆ’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಕೆಎಂಸಿಯ ಕೇಂದ್ರೀಯ ಕ್ಲಿನಿಕಲ್ ಎಂಬ್ರಿಯಾಲಜಿ ಕೇಂದ್ರದ ಮುಖ್ಯಸ್ಥ ಪ್ರೊ. ಸತೀಶ ಅಡಿಗ ತಿಳಿಸಿದ್ದಾರೆ.

ಸಂಶೋಧನಾ ತಂಡದಲ್ಲಿ ಕೆಎಂಸಿಯ ಡಾ.ಮಿಟೈ, ಡಾ.ಧಕ್ಷನ್ಯಾ, ಡಾ.ಶುಭಶ್ರೀ ಹಾಗೂ ಜರ್ಮನಿ ವಿ.ವಿ.ಯ ತಜ್ಞರು ಇದ್ದರು.