ADVERTISEMENT

ಕೈಗಾರಿಕೆಗಳ ಬೇಡಿಕೆಗೆ ತಕ್ಕ ಕುಶಲ ಕರ್ಮಿಗಳು ಅಗತ್ಯ: ಜಿಲ್ಲಾಧಿಕಾರಿ ಕೂರ್ಮಾರಾವ್

ಶಿಶಿಕ್ಷು ಮೇಳದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:19 IST
Last Updated 4 ಅಕ್ಟೋಬರ್ 2021, 15:19 IST
ಅಲೆವೂರು ಪ್ರಗತಿ ನಗರದಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಜಿಲ್ಲಾ ಶಿಶಿಕ್ಷು ಮೇಳದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿದರು.
ಅಲೆವೂರು ಪ್ರಗತಿ ನಗರದಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಜಿಲ್ಲಾ ಶಿಶಿಕ್ಷು ಮೇಳದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿದರು.   

ಉಡುಪಿ: ತಂತ್ರಜ್ಞಾನದ ಬೆಳವಣಿಗೆ ಹಾಗೂ ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕುಶಲ ಕರ್ಮಿಗಳನ್ನು ಒದಗಿಸುವ ಹೊಣೆಗಾರಿಕೆ ಕೈಗಾರಿಕಾ ತರಬೇತಿ ಸಂಸ್ಥೆಗಳದ್ದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಅಲೆವೂರು ಪ್ರಗತಿ ನಗರದಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ಜಿಲ್ಲಾ ‘ಶಿಶಿಕ್ಷು ಮೇಳ-2021’ ಉದ್ಘಾಟಿಸಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೈನಂದಿನ ತಾಂತ್ರಿಕ ಪರಿಣಿತ ಕುಶಲ ಕರ್ಮಿಗಳ ಅವಶ್ಯಕತೆಯಿದ್ದು, ಸ್ವಾವಲಂಬನೆಯ ಆಶಯದೊಂದಿಗೆ ಸ್ವಯಂಪ್ರಗತಿ ಸಾಧಿಸುವ ಹಾಗೂ ಯೋಜನೆಯ ನಿರ್ದಿಷ್ಟ ಗುರಿ ತಲುಪುವ ಅನುಭವಿ ತಂತ್ರಜ್ಞರ ಅವಶ್ಯಕತೆ ಪ್ರಸ್ತುತ ಹೆಚ್ಚಾಗಿದೆ ಎಂದರು.

ಶಿಶಿಕ್ಷು ಮೇಳದಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಕೈಗಾರಿಕೆಗಳು ಹಾಗೂ ತರಬೇತಿದಾರರ ನಡುವೆ ಸಮನ್ವಯದ ಸೇತುವೆ ಕಲ್ಪಿಸುವ ಕಾರ್ಯ ಆಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ADVERTISEMENT

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ತಾಂತ್ರಿಕ ಶಿಕ್ಷಣ ನೀಡುವ ದಿಸೆಯಲ್ಲಿ ಸರ್ಕಾರ ಹಲವು ಯೋಜನೆ ಹಾಗೂ ಕಾರ್ಯಕ್ರಮ ಜಾರಿಗೆ ತಂದಿದೆ. ಹೊಸ ಕಾಲೇಜುಗಳ ಸ್ಥಾಪನೆಯೊಂದಿಗೆ ಕಟ್ಟಡ, ಸಿಬ್ಬಂದಿ, ಮೂಲಸೌಕರ್ಯ ಸೇರಿದಂತೆ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಜಿಲ್ಲೆಯ ಕಾಲೇಜುಗಳಿಗೆ ಅಗತ್ಯ ಸೌಕರ್ಯಗಳನ್ನು ಪೂರೈಸುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಉಡುಪಿ ಚೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಹಾಗೂ ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಂಚನ್ ಮಾತನಾಡಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐಎಂಸಿ ಅಧ್ಯಕ್ಷ ವಿಶ್ವನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್‌.ಕುಮಾರ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿ ರಾಜು ಅಲೆವೂರು ಇದ್ದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಜಿಲ್ಲಾ ನೊಡಲ್ ಅಧಿಕಾರಿ ಜಗದೀಶ ಪ್ರಾಸ್ತಾವಿಕ ಮಾತನಾಡಿದರು. ನಾಡಾ ಐಟಿಐ ಪ್ರಾಂಶುಪಾಲ ಮನೋಹರ ಆರ್. ಕಾಮತ್ ಸ್ವಾಗತಿಸಿದರು, ಸತೀಶ್ ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.