ADVERTISEMENT

ನಾಲ್ಕು ವಲಯ; 16 ತಂಡಗಳು ಭಾಗಿ

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 15:39 IST
Last Updated 23 ನವೆಂಬರ್ 2023, 15:39 IST
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಯನ್ನು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಯನ್ನು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.   

ಉಡುಪಿ: ಮನುಷ್ಯನ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕಾದರೆ ದೇಹ ಅನಾರೋಗ್ಯಗಳಿಂದ ಮುಕ್ತವಾಗಿರಬೇಕು. ಕಬ್ಬಡ್ಡಿಯಂತಹ ದೇಹ ದಂಡನೆಯ ಆಟೋಟಗಳು ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ಮಾತನಾಡಿ, ಜಾತಿ, ಮತ, ಧರ್ಮ, ನಂಬಿಕೆ ಎಲ್ಲ ಚೌಕಟ್ಟುಗಳನ್ನು ಕ್ರೀಡೆ ಮೀರಿ ನಿಲ್ಲುತ್ತದೆ. ಎಲ್ಲಾ ವರ್ಗ, ಸಮುದಾಯದವರು ಒಟ್ಟಾಗಿ ಭಾಗವಹಿಸುವ ಅವಕಾಶ ನೀಡುತ್ತದೆ. ವಿಶೇಷವಾಗಿ ಕಬಡ್ಡಿ ಕ್ರೀಡೆಯಲ್ಲಿ ಆಕ್ರಮಣ ಹಾಗೂ ರಕ್ಷಣೆ ಸಮ್ಮಿಳಿತವಾಗಿರುತ್ತದೆ. ಆಟಗಾರರು ಮೈ, ಮನಸ್ಸು ಸದಾ ಚುರುಕಿನಿಂದ ಕೂಡಿದ್ದಾಗ ಮಾತ್ರ ಗೆಲುವು ಒಲಿಯುತ್ತದೆ ಎಂದರು.

ADVERTISEMENT

ಅಖಿಲ ಭಾರತ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಎಲ್ಲರೂ ಕ್ರೀಡಾಮನೋಭಾವದಿಂದ ಭಾಗವಹಿಸಿ ಗೆಲುವು ತಮ್ಮದಾಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅರ್ಜುನ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ರಾಕೇಶ್ ಕುಮಾರ್ ಕ್ರೀಡೆಯಲ್ಲಿ ಯಶಸ್ಸು ದಕ್ಕಿಸಿಕೊಳ್ಳಬೇಕಾದರೆ ಸುಲಭ ಮಾರ್ಗಗಳು ಇಲ್ಲ. ಆಟಗಾರರು ಕಠಿಣ ಪರಿಶ್ರಮ ಹಾಕಿದರೆ ಮಾತ್ರ ಯಶಸ್ಸು ಸಿಗುತ್ತದೆ. ಕ್ರೀಡಾಕೂಟದಲ್ಲಿ ಗೆಲುವು ಪಡೆಯಲು ಆಟಗಾರರು ಶಕ್ತಿಮೀರಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಚಾಂಪಿಯನ್‌ಷಿಪ್‌ನ ಸಂಘಟನಾ ಕಾರ್ಯದರ್ಶಿ ಹಾಗೂ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಮಾತನಾಡಿದರು.

ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಪ್ರಾಧ್ಯಾಪಕ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಲ್‌.ರಾಮು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಿ.ಕೆ. ಕಿಶೋರ್‌ಕುಮಾರ್ ಉಪಸ್ಥಿತರಿದ್ದರು.

ಪಂಜಾಬ್‌ನ ಗುರುಕಾಶಿ ವಿವಿಯ ಆಟಗಾರರು ಜೆಎನ್‌ಸಿ ವಿವಿಯ ಆಟಗಾರನನ್ನು ಬಲೆಗೆ ಕೆಡವಲು ಸಿದ್ಧರಾಗಿರುವ ದೃಶ್ಯ

ಇಂದಿನ ಪಂದ್ಯಗಳು

ಗುರು ಕಾಶಿ ವಿವಿ ಪಂಜಾಬ್‌ v/s ಯೋಗಿ ವೇಮನಾ ವಿವಿ

ಜೆಎನ್‌ಸಿ ವಿವಿ v/s ಡಾ.ಬಿಎಎಂ ವಿವಿ

ವೇಲ್ಸ್‌ ಚೆನ್ನೈ v/s ಸಿಎಚ್‌ ಬನ್ಸಿ ಲಾಲ್ ವಿವಿ

ಹರ್ಯಾಣ ಜಗನ್ನಾಥ ಸಂಸ್ಕೃತ ವಿವಿ v/s ಮಂಗಳೂರು ವಿವಿ

ವಿಬಿಎಸ್‌ ಪೂರ್ವಾಂಚಲ್‌ ವಿವಿ v/s ಡಿಎವಿ ವಿವಿ ಇಂಧೋರ್ ಎಂಡಿ ವಿವಿ

ರೋಹ್ಟಕ್ v/sಅದಮಾಸ್ ವಿವಿ

ಕೋಟ ವಿವಿ v/s ಮೈಸೂರು ವಿವಿ

ಎಸ್‌ಜೆಜೆಟಿ ವಿವಿ v/s ಚಂಡಿಘಡ ವಿವಿ

ಗುರು ಕಾಶಿ ವಿವಿ v/s ಡಾ.ಬಿಎಎಂ ವಿವಿ

ಜೆಎನ್‌ಸಿ ವಿವಿ v/s ಯೋಗಿ ವೆಮನ ವಿವಿ

ಚಂಡಿಘಡ ವಿವಿ v/s ಮಂಗಳೂರು ವಿವಿ

ವಿಬಿಎಸ್‌ ಪೂರ್ವಾಂಚಲ್‌ ವಿವಿ v/s ವೇಲ್ಸ್‌ ಚೆನ್ನೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.