ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 26ರಂದು

ಸಮ್ಮೇಳನಾಧ್ಯಕ್ಷೆ ವೈದೇಹಿ ಅವರಿಗೆ ಕಸಾಪದಿಂದ ಅಧಿಕೃತ ಆಮಂತ್ರಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 12:24 IST
Last Updated 20 ಜನವರಿ 2021, 12:24 IST
ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಲೇಖಕಿ ವೈದೇಹಿ ಅವರ ನಿವಾಸಕ್ಕೆ ಬುಧವಾರ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇತೃತ್ವದ ತಂಡ ಭೇಟಿ ನೀಡಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಮಂತ್ರಣ ನೀಡಿತು.
ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಲೇಖಕಿ ವೈದೇಹಿ ಅವರ ನಿವಾಸಕ್ಕೆ ಬುಧವಾರ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇತೃತ್ವದ ತಂಡ ಭೇಟಿ ನೀಡಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಮಂತ್ರಣ ನೀಡಿತು.   

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯ ಆವರಣದಲ್ಲಿ ಜ.26ರಂದು ಹದಿನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು, ಉಸಿರು ಕೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಮ್ಮೇಳನ ನಡೆಯುತ್ತಿದೆ. ಸಾಹಿತಿ ವೈದೇಹಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ಬೆಳಿಗ್ಗೆ 8.30ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. 9.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಬರಮಾಡಿಕೊಳ್ಳಲಾಗುವುದು. ಸಾಧಕಿ ಜಾನಕಿ ಹಂದೆ, ರೈತ ಮಹಿಳೆ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಕುಲಾಲ್ ಆವರ್ಸೆ ದೀಪ ಪ್ರಜ್ವಲಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಹಂಗಾರಕಟ್ಟೆಯ ಚೇತನ ಪ್ರೌಢಶಾಲೆಯ ಆವರಣ ಹಾಗೂ ಮಾಬುಕಳದ ಬಿ.ಡಿ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಾಣ ಮಾಡಲಾಗಿರುವ 2 ಸಮಾನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿವೆ. ವೇದಿಕೆಗಳಿಗೆ ಸರಸ್ವತಿ ಬಾಯಿ ರಾಜವಾಡೆ ಹೆಸರಿಡಲಾಗಿದೆ.

ಮೊದಲ ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಡಾ.ಬಿ.ಜನಾರ್ದನ ಭಟ್‌ ಮಾತನಾಡಲಿದ್ದಾರೆ. ಮಧ್ಯಾಹ್ನ 12ಕ್ಕೆ ‘ನನ್ನ ಕಥೆ; ನಿಮ್ಮ ಜೊತೆ’ ಕಾರ್ಯಕ್ರಮ ನಡೆಯಲಿದ್ದು, ನಟರಾದ ಓಂಗಣೇಶ್‌, ಯಾಕೂಬ್ ಖಾದರ್ ಗುಲ್ವಾಡಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.

ಮಧ್ಯಾಹ್ನ 1ಕ್ಕೆ ‘ನಮ್ಮ ಉಡುಪಿ’ ವಿಚಾರಗೋಷ್ಠಿಯಲ್ಲಿ ‘ಗ್ರಾಮ್ಯ ಭಾಷೆಯ ಸೊಗಡು’ ಕುರಿತು ಬಿ.ಸಂಜೀವ, ‘ಹೈನುಕೃಷಿ’ ಕುರಿತು ಪ್ರಗತಿಪರ ರೈತ ಪ್ರಕಾಶ್‌ಚಂದ್ರ ಶೆಟ್ಟಿ, ರಂಗಭೂಮಿ ಕುರಿತು ಗೋಪಾಲಕೃಷ್ಣ ನಾಯರಿ, ಪತ್ರಿಕೋದ್ಯಮದ ಸವಾಲುಗಳು ಕುರಿತು ಗಣೇಶ್‌ ಪ್ರಸಾದ್ ಪಾಂಡೇಲು ವಿಷಯ ಮಂಡಿಸಲಿದ್ದಾರೆ ಎಂದರು.

ಮಧ್ಯಾಹ್ನ 2 ರಿಂದ 3ರವರೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ‘ಒಂದಿಷ್ಟು ಹೊತ್ತು’ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿಗಳಾದ ಸವಿತಾ ನಾಗಭೂಷಣ, ಭುವನೇಶ್ವರಿ ಹೆಗಡೆ, ಜ್ಯೋತಿ ಗುರುಪ್ರಸಾದ್, ಅಂಶುಮಾಲಿ, ಉದಯ ಗಾಂವ್ಕರ್, ಚಂದನ ಬ್ರಹ್ಮಾವರ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. 3 ಗಂಟೆಗೆ ಮಹಿಳಾ ವೇದಿಕೆ ಕೂಟ ಮಹಾಜಗತ್ತು ತಂಡದಿಂದ ನೃತ್ಯ, 3.15ಕ್ಕೆ ‘ನನ್ನ ಭಾಷೆ ನನ್ನ ಹೆಮ್ಮೆ’ ವಿಷಯದ ಕುರಿತು ಕೋಟೇಶ್ವರ ಸುಬ್ಬಣ್ಣ ಶೆಟ್ಟಿ ಅವರೊಂದಿಗೆ ಸಂವಾದ. ಬಳಿಕ ಬಹಿರಂಗ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.

4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಲೇಖಕಿ ಆರ್‌.ಪೂರ್ಣಿಮಾ ಭಾಷಣ ಮಾಡಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ, ಕಾಸರಗೋಡು ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಬಿ.ಭಟ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಯಮಿ ಆನಂದ್ ಸಿ.ಕುಂದರ್ ಸಾಧಕರನ್ನು ಗೌರವಿಸಲಿದ್ದಾರೆ ಎಂದು ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.‌

ಬಿ.ಡಿ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ವೇದಿಕೆಯಲ್ಲಿ ಬೆಳಿಗ್ಗೆ 8ಕ್ಕೆ ಅಂಬಲಪಾಡಿ ಸಂತೋಷ ಸರಳಾಯ ಅವರ ‘ಉದಯ ರಾಗ’ ವೀಣಾವಾದನ, 10ಕ್ಕೆ ಕವಿಗೋಷ್ಠಿ, 11.30ಕ್ಕೆ ಮರೆಯಲಾಗದ ಮಹನೀಯರು ಕಾರ್ಯಕ್ರಮ, 1ಕ್ಕೆ ಯಕ್ಷಗಾನ ಸ್ಥಿತ್ಯಂತರ ಕುರಿತು ಪ್ರಸಾದ್ ಮೊಗೆಬೆಟ್ಟು ಅವರ ಗೋಷ್ಠಿ, 2ಕ್ಕೆ ಮಹಿಳೆ ಮತ್ತು ಸಾಮಾಜಿಕ ಸವಾಲು ವಿಷಯ ಕುರಿತು ಡಾ.ರಶ್ಮಿ ಕುಂದಾಪುರ, ವೈದೇಹಿಯವರ ಬರಹದಲ್ಲಿ ಮಹಿಳಾ ಪ್ರಜ್ಞೆ ವಿಷಯದ ಬಗ್ಗೆ ಡಾ.ಜ್ಯೋತಿ ಚೇಳೈರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.