ADVERTISEMENT

ಕಾಪುವಿಗೆ ತಾಲ್ಲೂಕು ಆಸ್ಪತ್ರೆ ಬೇಡಿಕೆ: ಸಿಕ್ಕಿದ್ದು ಬ್ಲಾಕ್ ಆಸ್ಪತ್ರೆ

ಹಮೀದ್ ಪಡುಬಿದ್ರಿ
Published 7 ಜನವರಿ 2026, 2:59 IST
Last Updated 7 ಜನವರಿ 2026, 2:59 IST
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ   

ಪಡುಬಿದ್ರಿ: ತಾಲ್ಲೂಕಿನ ಕೇಂದ್ರ ಸ್ಥಾನವಾದ ಕಾಪುವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾಡಬೇಕು ಎಂಬ ಕೂಗಿನ ಮಧ್ಯೆ ಸರ್ಕಾರ ಬ್ಲಾಕ್ ಆಸ್ಪತ್ರೆಯನ್ನಾಗಿಸುವ ಮೂಲಕ ಜನರ ನಿರೀಕ್ಷೆಯನ್ನು ಸದ್ಯಕ್ಕೆ ಹುಸಿಯಾಗಿಸಿದೆ.

2017ರಲ್ಲಿ ಕಾಪು ತಾಲ್ಲೂಕಾಗಿ ಘೋಷಣೆಯಾಗಿದೆ. ತಾಲ್ಲೂಕಿನಲ್ಲಿ ಶಿರ್ವ ಸಮುದಾಯ ಆಸ್ಪತ್ರೆ, ಕಾಪು, ಮೂಡಬೆಟ್ಟು, ಪಡುಬಿದ್ರಿ, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹಿತ ಒಟ್ಟು ಐದು ಸರ್ಕಾರಿ ಆಸ್ಪತ್ರೆಗಳಿವೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರವಿದ್ದು, ಈ ಭಾಗದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿರುತ್ತವೆ. ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಂದ ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಆಶ್ರಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿಸಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.

ADVERTISEMENT

ಸರ್ಕಾರ ಕೆಲವೊಂದು ತಾಂತ್ರಿಕ ಕಾರಣಗಳನ್ನು ನೀಡಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಬ್ಲಾಕ್ ಆಸ್ಪತ್ರೆಯನ್ನಾಗಿ ಮಾಡಲು ಮುಂದಾಗಿದೆ. ಇದರಿಂದ ಕಾಪು ತಾಲ್ಲೂಕು ಆಸ್ಪತ್ರೆಯಿಂದ ವಂಚಿತವಾಗಲಿದೆ.

ಪಡುಬಿದ್ರಿ ಆಸ್ಪತ್ರೆಯನ್ನು ಸಮುದಾಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಆಗ್ರಹವೂ ಇದೆ. ಇಲ್ಲಿಗೂ ಪ್ರತಿದಿನ ಗ್ರಾಮೀಣ ಪ್ರದೇಶಗಳಿಂದ ನೂರಾರು ರೋಗಿಗಳು ಬರುತ್ತಿದ್ದಾರೆ. ಇದನ್ನು ಸಮುದಾಯ ಆಸ್ಪತ್ರೆಯಾಗಿ ಮೇದರ್ಜೆಗೇರಿಸಬೇಕೆಂಬುದು ಜನರ ಬೇಡಿಕೆಯಾಗಿದೆ.

ಜಿಲ್ಲೆಯಲ್ಲಿ ಸಮುದಾಯ ಅರೋಗ್ಯ ಕೇಂದ್ರವು ಜನಸಂಖ್ಯೆ ಅಧಾರದ ಮೇಲೆ 11 ಇರಬೇಕಿತ್ತು. ಆದರೆ ಇದುವರೆಗೆ ಕೇವಲ ಆರು ಮಾತ್ರ ಇವೆ. ಜಿಲ್ಲೆಯಲ್ಲಿ ಇನ್ನೂ ಐದು ಸಮುದಾಯ ಕೇಂದ್ರಗಳಿಗೆ ಅವಕಾಶಗಳಿದ್ದು, ಪಡುಬಿದ್ರಿ, ಹಿರಿಯಡ್ಕ ಪರಿಸರಕ್ಕೆ ಸಮುದಾಯ ಕೇಂದ್ರದ ಬೇಡಿಕೆ ಇದೆ. ಪ್ರಸ್ತಾವನೆ ಸಲ್ಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಲೀನದ ಹಂತದಲ್ಲಿ: ಕಾಪು, ಮೂಡಬೆಟ್ಟು, ಪಡುಬಿದ್ರಿ, ಮುದರಂಗಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಜನಸಂಖ್ಯೆ ಆಧಾರದ ಮೇಲೆ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ರೋಗಿಗಳು ಸೇವೆಯಿಂದ ವಂಚಿತರಾಗುವ ಭೀತಿ ಎದುರಾಗಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

5 ಸಾವಿರ ಜನಸಂಖ್ಯೆ ಆಧಾರದ ಮೇಲೆ ಆರೋಗ್ಯ ಉಪಕೇಂದ್ರಗಳು ಇರಬೇಕಾಗಿತ್ತು. ಜನಸಂಖ್ಯೆ ಆಧಾರದಂತೆ 197 ಇರಬೇಕಾಗಿತ್ತು. ಆದರೆ ಈಗ ಜಿಲ್ಲೆಯಲ್ಲಿ 325 ಕಾರ್ಯಾಚರಿಸುತ್ತಿವೆ. ಇದರಲ್ಲಿ ಈಗ ಶೇ 50 ರಷ್ಟು ಮುಚ್ಚಲು ಸರ್ಕಾರ ಮುಂದಾಗಿದೆ ಈ ನಿರ್ಧಾರಕ್ಕೆ ಗ್ರಾಮೀಣ ಪ್ರದೇಶದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಪು ತಾಲ್ಲೂಕು ರಚನೆಯಾದ ಮೇಲೆ ಅದಕ್ಕೆ ಬೇಕಾಗುವ ಸವಲತ್ತುಗಳನ್ನು ಒದಗಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಜನರ ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ತಾಲ್ಲೂಕು ಆಸ್ಪತ್ರೆಯ ಅಗತ್ಯವನ್ನು ಪ್ರಥಮ ಹಂತದಲ್ಲಿ ಪೂರೈಸಬೇಕು ಎಂದು ಸಾಮಾಜಿಕ ಕಾರ್ಯಕರ್ತರ ಅನ್ವರ್ ಆಲಿ ಕಾಪು ಆಗ್ರಹಿಸಿದ್ದಾರೆ

ಇಂದಿನ ವಿಷಮ ಸ್ಥಿತಿಯಲ್ಲಿ ಆರೋಗ್ಯದ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆ ಇಲ್ಲದೆ ಪ್ರತಿಯೊಂದಕ್ಕೂ ಖಾಸಗಿ ಒಡೆತನದ ಆಸ್ಪತ್ರೆಯನ್ನು ಅವಲಂಬಿಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಶೇಖರ್ ಹೆಜಮಾಡಿ ತಿಳಿಸಿದ್ದಾರೆ.

ಹೊಸದಾಗಿ ರೂಪುಗೊಂಡ ಯಾವುದೇ ತಾಲ್ಲೂಕಿಗೆ ತಾಲ್ಲೂಕು ಆಸ್ಪತ್ರೆಯನ್ನು ಸರ್ಕಾರ ನೀಡಿಲ್ಲ. ಕಾಪುವಿಗೆ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಹಾಗೂ ಪಡುಬಿದ್ರಿ ಪಿಎಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಗುರ್ಮೆ ಸುರೇಶ್ ಶೆಟ್ಟಿ ಕಾಪು ಶಾಸಕ
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆ ಸಾಮರ್ಥ್ಯದ ಬ್ಲಾಕ್ ಆಸ್ಪತ್ರೆಯನ್ನಾಗಿಸಲಾಗುವುದು. ಮುಂದಿನ ದಿನಗಳಲ್ಲಿ ಕಾಪು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ
ಡಾ. ಬಸವರಾಜ ಜಿ. ಹುಬ್ಬಳ್ಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.