ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮದ ಮೂಲಕ ಬಿಕರ್ನಕಟ್ಟೆವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಗ್ರಾಮಸ್ಥರ ಸಮಸ್ಯೆ ಪರಿಹಾರವಾಗಿಲ್ಲ.
ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯ ಇಕ್ಕೆಲಗಳಲ್ಲಿ ಕುಡಿಯುವ ನೀರಿನ ನಳ್ಳಿ, ಪೈಪ್‌ಗಳು ಒಡೆದು ಹೋಗಿ ತೊಂದರೆಯಾಗಿದೆ. ಅಲ್ಲಲ್ಲಿ ಸಂಪರ್ಕ ರಸ್ತೆಗಳನ್ನು ಕಡಿದು ಹಾಕಿರುವ ಕಾರಣ ಗ್ರಾಮಸ್ಥರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ.
ವಾರಾಹಿ ನೀರಾವರಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಯು ಪಂಚಾಯಿತಿ ವ್ಯಾಪ್ತಿಯ ಒಳರಸ್ತೆಗಳನ್ನು ಕಡಿದು ಹಾಕಿ, ಅಗಲವಿರುವ ರಸ್ತೆಗಳನ್ನು ಕಿರಿದು ಮಾಡಿ ಜನರಿಗೆ ಓಡಾಡಲು, ವಾಹನ ಸಂಚಾರ ಮಾಡಲು ತೊಂದರೆಯಾಗುತ್ತಿದೆ. ಗ್ರಾಮದ ಮರತಂಗಡಿ, ಚಿಕ್ಕಬೆಟ್ಟು, ಮುದ್ದಣ್ಣ ನಗರ, ಇಂದಿರಾ ನಗರದ ಕಾಂಕ್ರೀಟ್ ರಸ್ತೆಗಳು ಹಾಳಾಗಿವೆ.
ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಈಚೆಗೆ ಸುರಿದ ಮಳೆಗೆ ಹಲವು ಸಮಸ್ಯೆಗಳು ಎದುರಾಗಿವೆ. ಇನ್ನು ಮಳೆಗಾಲ ಪ್ರಾರಂಭವಾದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ. ತಗ್ಗು ಪ್ರದೇಶಗಳಿಗೆ ನೀರು ತುಂಬುತ್ತಿದೆ. ಶೀಘ್ರ ಚರಂಡಿ ನಿರ್ಮಾಣ ಮಾಡಿ ಮನೆ, ಅಂಗಡಿಗಳಿಗೆ ಮಳೆನೀರು ನುಗ್ಗಿ ಸಂಭವಿಸುವ ಹಾನಿ ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
2 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಇನ್ನೂ ಪ್ರಸ್ತಾವನೆ ಅಂಗೀಕಾರವಾಗಿಲ್ಲ. ಸರ್ವಿಸ್ ರಸ್ತೆಗಳಿಲ್ಲದೆ ಹೆದ್ದಾರಿಯ ಅಕ್ಕಪಕ್ಕದ ಅಡ್ಡರಸ್ತೆಯಿಂದ ವಾಹನಗಳು, ಜನರು ನೇರವಾಗಿ ಹೆದ್ದಾರಿಯ ಮುಖ್ಯರಸ್ತೆಗೆ ಬರುತ್ತಿದ್ದು, ಈಗಾಗಲೇ ಹಲವಾರು ಅಪಘಾತ ಸಂಭವಿಸಿವೆ. ಬೀದಿ ದೀಪಗಳಿಲ್ಲದೆ ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸರ್ವಿಸ್ ರಸ್ತೆ ಪೂರ್ಣಗೊಂಡಲ್ಲಿ ಬೀದಿದೀಪದ ವ್ಯವಸ್ಥೆ ಮಾಡಬೇಕು. ಡೈವರ್ಷನ್‌ನಲ್ಲಿ ಪ್ರಯಾಣಿಕರಿಗೆ ಗೊಂದಲವಾಗದಂತೆ ಬ್ಲಿಂಕರ್, ಬೆಳಕಿನ ವ್ಯವಸ್ಥೆ, ಫ್ಲೋರಸೆಂಟ್ ಸ್ಟಿಕ್ಕರ್‌ಗಳನ್ನು ಅಳವಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ರಸ್ತೆಯ ಎರಡೂ ಕಡೆ ಗಿಡ ನೆಡುವ ಕಾರ್ಯವನ್ನು ಮಳೆಗಾಲದಲ್ಲಿ ಪ್ರಾರಂಭ ಮಾಡಿದರೆ ಮುಂದಿನ ಬೇಸಿಗೆಗೆ ಅನುಕೂಲವಾಗಬಹುದು. ಸಾಣೂರು ರಾ.ಹೆ ಹೊಸ ಸೇತುವೆಗೆ ಪಿಲ್ಲರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುತ್ತಲೂ ಮಣ್ಣು ರಾಶಿ ಹಾಕಿರುವುದರಿಂದ ಮಳೆನೀರು ಪಕ್ಕದ ಗದ್ದೆಗಳಿಗೆ ನುಗ್ಗಿ ಕೃತಕ ನೆರೆ ಉಂಟಾಗುತ್ತಿದೆ. ಶಾಂಭವಿ ನದಿಯ ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು.
ರಸ್ತೆ ಕಾಮಗಾರಿ ನಡೆಯುವ ಅಕ್ಕಪಕ್ಕದಲ್ಲಿ ಮಣ್ಣು, ಕಬ್ಬಿಣದ ಸಾಮಗ್ರಿಗಳನ್ನು ಅಲ್ಲಲ್ಲಿ ರಾಶಿ ಹಾಕಲಾಗಿದ್ದು, ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಅವುಗಳನ್ನು ತೆರವುಗೊಳಿಸಬೇಕು.
ಹೆದ್ದಾರಿ ಕಾಮಗಾರಿ ಸಂದರ್ಭ ಕಿತ್ತು ಹಾಕಿರುವ ಸರ್ಕಾರಿ ಶಿಕ್ಷಣ ಸಂಸ್ಥೆಯ ಕಾಂಕ್ರೀಟ್ ಪ್ರವೇಶ ದ್ವಾರ, ಬಸ್ ಪ್ರಯಾಣಿಕರ ತಂಗುದಾಣ ಕಟ್ಟಡವನ್ನು ನಿರ್ಮಿಸಿಕೊಡಬೇಕು. ತಡೆಗೋಡೆ ಮೇಲ್ಭಾಗಕ್ಕೆ ಕನಿಷ್ಠ 5 ಅಡಿ ಎತ್ತರ ಸುರಕ್ಷತಾ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಬೇಕು. ಕಟ್ಟಡದ ಮುಂಭಾಗದ ಕೊರಕಲು ಪ್ರದೇಶಕ್ಕೆ ಮಣ್ಣು ತುಂಬಿಸಿ ಸುರಕ್ಷತೆ ನೀಡಬೇಕು. ಕಟ್ಟಡದ ಹಿಂಭಾಗದ ಗುಡ್ಡ ಕುಸಿಯುತ್ತಿದ್ದು, ಇನ್ನಷ್ಟು ದೂರದವರೆಗೆ ಮಣ್ಣನ್ನು ತೆಗೆದು ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಆಟದ ಮೈದಾನದಲ್ಲಿ ಸಂಗ್ರಹಗೊಂಡಿರುವ ಹೆಚ್ಚುವರಿ ಮಣ್ಣನ್ನು ಹೊರಗೆ ಸಾಗಿಸಬೇಕು. ಮುರತಂಗಡಿ ಇರ್ವತ್ತೂರು ಜಂಕ್ಷನ್‌ನಲ್ಲಿ ಅಪೂರ್ಣಗೊಂಡಿರುವ ಸರ್ವಿಸ್ ರೋಡ್ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಅಗಲಗೊಳಿಸಿ ರಾತ್ರಿ ವೇಳೆಯಲ್ಲಿ ಅನುಕೂಲವಾಗುವಂತೆ ಹೈ ಮಾಸ್ಟ್ ದೀಪಗಳನ್ನು ಅಳವಡಿಸಬೇಕು.
ಸಾಣೂರು ಫುಲ್ಕೇರಿ– ಬೈಪಾಸ್ ವೃತ್ತದ ಬಳಿ ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿ, ಕಳಸ, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ ಭಾಗಕ್ಕೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ದೊಡ್ಡ ಸೂಚನಾ ಫಲಕ, ಹೈಮಾಸ್ಟ್ ದೀಪ ಅಳವಡಿಸಬೇಕು.
ಪದ್ಮನಾಭನಗರದಲ್ಲಿರುವ ಯುವಕ ಮಂಡಲದ ಕಚೇರಿ ಎದುರು ಹಾಕಿರುವ ಕೆಂಪು ಕಲ್ಲಿನ ಹಾಸು ಕಲ್ಲುಗಳನ್ನು ಕಡಿದು ಹಾಕಿ, ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ತೊಂದರೆಯಾಗಿದೆ. ಕಾಮಗಾರಿ ಆರಂಭಿಸುವಾಗ ಎಲ್ಲವನ್ನೂ ಸರಿ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದ ಗುತ್ತಿಗೆದಾರರು ಈಗ ಕಾಣ್ಮರೆಯಾಗಿದ್ದಾರೆ ಎಂದು ಸಾಣೂರು ಯುವಕ ಮಂಡಲದ ಅಧ್ಯಕ್ಷ ಮತ್ತು ಸದಸ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.